ಉಡುಪಿ: ಜಿಲ್ಲಾ ಮಟ್ಟದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲು ಎಲ್ಲಾ ರೀತಿಯ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವುದರ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ ಎಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ನಗರದ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಹಿರಿಯ ನಾಗರೀಕ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವು ಅಕ್ಟೋಬರ್ 1 ರಂದು ನಗರದ ಎಂ.ಜಿ.ಎಂ ನ ರವೀಂದ್ರ ಕಲಾ ಮಂಟಪದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಅಂದು ಬೆಳಗ್ಗೆ 9 ರಿಂದ ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಹ ಉಪನ್ಯಾಸಕರಿಂದ ಏರ್ಪಡಿಸಲಾಗುವುದು ಎಂದರು.
ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಹಿರಿಯ ನಾಗರಿಕರಿಗೆ ಕ್ರೀಡಾ ಸ್ಪರ್ಧೆಗಳು ಸೆಪ್ಟೆಂಬರ್ 4 ರಂದು ನಗರದ ಅಜ್ಜರಕಾಡುವಿನ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗುತ್ತಿದೆ ಎಂದರು.
ಹಿರಿಯ ನಾಗರಿಕರ ದಿನಾಚರಣೆಯನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕು. ಶಿಷ್ಟಾಚಾರದಂತೆ ಅಹ್ವಾನ ಪತ್ರಿಯನ್ನು ಮುದ್ರಿಸಿ ಜನ ಪ್ರತಿನಿಧಿ ಹಾಗೂ ಗಣ್ಯರಿಗೆ ನೀಡಿ ಆಹ್ವಾನಿಸಬೇಕು ಎಂದ ಅವರು, ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಮಟ್ಟದಲ್ಲಿ ಕ್ರೀಡಾ ವಿಭಾಗದಲ್ಲಿ ಮ್ಯೂಸಿಕಲ್ ಚೇರ್, ಬಿರುಸಿನ ನಡಿಗೆ ಹಾಗೂ ಬಕೆಟ್ನಲ್ಲಿ ಬಾಲ್ ಎಸೆಯುವ ಸ್ಪರ್ಧೆಗಳನ್ನು ಆಯೋಜಿಸಿದ್ದು, ಮಹಿಳಾ 60 ರಿಂದ 70 ವರ್ಷದ ವಯೋಮಾನದ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಹಾಗೂ 60 ರಿಂದ 69 ವರ್ಷ ವಯೋಮಾನದ ಬಿರುಸಿನ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಪುರುಷ ಹಿರಿಯ ನಾಗರಿಕರನ್ನು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದ ಅವರು, ರಾಜ್ಯಮಟ್ಟಕ್ಕೆ ಆಯ್ಕೆಯಾದ ಸ್ಪರ್ಧಿಗಳಿಗೆ ಪ್ರಯಾಣದರ, ವಸತಿ, ಊಟ ಮತ್ತು ಉಪಾಹಾರದ ವ್ಯವಸ್ಥೆಯನ್ನು ಇಲಾಖೆಯ ವತಿಯಿಂದ ಕಲ್ಪಿಸಲಾಗುವುದು ಎಂದರು. ಕ್ರೀಡಾ ವಿಭಾಗದಲ್ಲಿ 3 ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ 2 ಸೇರಿದಂತೆ ಒಟ್ಟು ಐದು ಸ್ಪರ್ಧೆಯಲ್ಲಿ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 60 ರಿಂದ 69 ವರ್ಷ ಮತ್ತು 70 ವರ್ಷ ಹಾಗೂ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ಗಾಯನ ಸ್ಪರ್ಧೆ ಹಾಗೂ ಏಕಪಾತ್ರಭಿನಯ ಸ್ಪರ್ಧೆಗಳು ನಡೆಯಲಿವೆ ಎಂದರು.
ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಪ್ರೌಢಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ನಮ್ಮ ಹಿರಿಯರು ನಮ್ಮ ಆದರ್ಶ ಎಂಬ ಶೀರ್ಷಿಕೆಯಡಿ ಹಿರಿಯರ ಮೌಲ್ಯಗಳು, ತತ್ವ ಸಿದ್ಧಾಂತಗಳು, ಸತ್ಯ ನ್ಯಾಯ ನೀತಿ, ಸಂಸ್ಕಾರ, ಹಿರಿಯರನ್ನು ನಿರ್ಲಕ್ಷಿಸದೇ ವೃದ್ಧಾಶ್ರಮಗಳಿಗೆ ಕಳುಹಿಸದೇ ಅವರ ಲಾಲನೆ, ಪಾಲನೆ, ಸಂರಕ್ಷಣೆ ಕಾಯ್ದೆ ಕುರಿತು ವಾಕ್ಚಾತುರ್ಯ ಸ್ಪರ್ಧೆಗಳನ್ನು ಆಯೋಜಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ, ವಾರ್ತಾಧಿಕಾರಿ ಮಂಜುನಾಥ್ ಬಿ, ಡಿಡಿಪಿಯು ಮಾರುತಿ, ಡಿಡಿಪಿಐ ಗಣಪತಿ ಹಾಗೂ ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.