ಹಿರಿಯ ನಾಗರಿಕರ ಜೀವನ ಶೈಲಿ ಯುವಜನತೆಗೆ ಮಾದರಿ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ: ಯುವಜನತೆಗೆ ಮಾದರಿಯಾಗುವ ರೀತಿಯಲ್ಲಿ ಹಿರಿಯ ನಾಗರಿಕರು ಜೀವನ ನಡೆಸುತ್ತಿದ್ದು, ನಮ್ಮ ಬದುಕಿಗೆ ದಾರಿ ಮಾಡಿಕೊಟ್ಟ ಹಿರಿಯ ನಾಗರಿಕರ ಕೊನೆಗಾಲದ ಬದುಕನ್ನು ಹಸನು ಗೊಳಿಸುವುದು ಪ್ರತಿಯೊಬ್ಬ ಯುವಜನರ ಕರ್ತವ್ಯ
ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

ಅವರು ಬುಧವಾರ ನಗರದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ
ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಹಿರಿಯ ನಾಗರಿಕರ ಸಂಸ್ಥೆಗಳು, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ (ರಿ), ವೃದ್ಧಾಶ್ರಮಗಳು ಉಡುಪಿ ಹಾಗೂ ಕೆನರಾ ಬ್ಯಾಂಕ್ ವೃತ್ತ ಕಚೇರಿ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ನಡೆದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಫರ್ಧೆಗಳಿಗೆ ಬಕೆಟ್‌ಗೆ ಬಾಲ್ ಎಸೆಯುವ ಮೂಲಕ
ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡುತ್ತಿದ್ದರು.

ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆ, ಆರ್ಥಿಕ ಭದ್ರತೆ ಹಾಗೂ ಉತ್ತಮ ವಾತಾವರಣ ಕಲ್ಪಿಸಲು ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಪ್ರತೀವರ್ಷ ಅಕ್ಟೋಬರ್ 1 ರಂದು ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ ಎಂದ ಅವರು, ಇದರ ಅಂಗವಾಗಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಹಿರಿಯ ನಾಗರಿಕರು ಯಾವುದೇ ಹಿಂಜರಿಕೆ ಇಲ್ಲದೆ
ಸಕ್ರೀಯವಾಗಿ ಪಾಲ್ಗೊಳ್ಳುವಂತೆ ತಿಳಿಸಿದರು.

ಕ್ರೀಡಾಂಗಣದಲ್ಲಿ ಹಿರಿಯ ನಾಗರಿಕರು ಭಾಗವಹಿಸುವುದರಿಂದ ಮನಸ್ಸಿಗೆ ಲವಲವಿಕೆ ಉಂಟಾಗುವುದರ ಜೊತೆಗೆ ನೆರೆಹೊರೆಯವರೊಂದಿಗೆ
ಒಡನಾಟವನ್ನು ಹೊಂದಿ, ಜೀವನೋತ್ಸಾಹ ಹೆಚ್ಚುತ್ತದೆ. ಆದ್ದರಿಂದ ವಯಸ್ಸು ಕೇವಲ ದೇಹಕ್ಕೆ ಮಾತ್ರ ಮನಸ್ಸಿಗಲ್ಲ ಎಂಬ ಚಿಂತನೆಯೊಂದಿಗೆ ಪ್ರತಿಯೊಬ್ಬ ಹಿರಿಯ ನಾಗರಿಕರು ಕ್ರಿಯಾಶೀಲರಾಗಿ ಸಕ್ರಿಯವಾಗಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ ಪುರುಷೋತ್ತಮ ಮಾತನಾಡಿ, ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ. ಹಿರಿಯ ನಾಗರಿಕರೆಂದು ಅವರುಗಳನ್ನು ನಿರ್ಲಕ್ಷ್ಯ ಮಾಡದೇ ಅವರ ವೃದ್ಧಾಪ್ಯ ಜೀವನವನ್ನು ಉತ್ತಮ ರೀತಿಯಲ್ಲಿ ಸಾಗಿಸಲು ಅನುವು ಮಾಡಿಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ಮ್ಯಾನೆಜರ್ ಹರೀಶ್ ಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ ಅನುರಾಧ ಹಾದಿಮನೆ, ಜಿಲ್ಲಾ ಮಹಿಳಾ ಮಂಡಲದ ಒಕ್ಕೂಟದ ಸರಳ ಕಾಂಚನ್, ಬ್ರಹ್ಮಾವರ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಉದಯ್ ಕುಮಾರ್, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಹಿರಿಯ
ನಾಗರಿಕರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಹಿರಿಯ ನಾಗರಿಕರುಗಳಿಗೆ ಕ್ರೀಡಾ ವಿಭಾಗದಲ್ಲಿ ಮ್ಯೂಸಿಕಲ್ ಚೇರ್, ಬಿರುಸಿನ ನಡಿಗೆ ಸ್ಪರ್ಧೆ ಹಾಗೂ ಬಕೆಟ್‌ನಲ್ಲಿ ಬಾಲ್ ಎಸೆಯುವ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ ಗಾಯನ ಸ್ಪರ್ಧೆ ಹಾಗೂ ಏಕಪಾತ್ರಾಭಿನಯ ಸ್ಪರ್ಧೆಗಳು ನಡೆದವು.

ಈ ಸಂದರ್ಭದಲ್ಲಿ ಹಿರಿಯ ನಾಗರಿಕರುಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಹೆಗ್ಡೆ ಸ್ವಾಗತಿಸಿ, ಗಣನಾಥ್ ಎಕ್ಕಾರು ನಿರೂಪಿಸಿದರೆ,
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರತ್ನ ವಂದಿಸಿದರು.