ಹಿರಿಯಡಕ: ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ ಮಾಡಿದ ಆರೋಪಿಗಳ ವಿರುದ್ಧ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಜರಗುತ್ತು ಅಂಜಾರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾದ ರೇವುನಾಥ ಪ್ರೇಮನಾಥ ಸಂದರ್ಶನಕ್ಕೆ ಮೇ 20ರಂದು ಆತನ ಸ್ನೇಹಿತರಾದ ಸುಧೀಶ ಮತ್ತು ವರುಣ ಅವರು ಹಣ್ಣು, ಬಿಸ್ಕೇಟ್ಗಳನ್ನು ತಂದಿದ್ದು, ಮುಖ್ಯದ್ವಾರದಲ್ಲಿ ದ್ವಾರ ಪಾಲಕನಾಗಿ ಕರ್ತವ್ಯಕ್ಕೆ ಇದ್ದ ಸಂತೋಷ ದಗಾಟೆ ಅವರಿಗೆ ನೀಡಿ ರೇವುನಾಥ ಅವರಿಗೆ ಕೊಡಲು ತಿಳಿಸಿದ್ದರು. ಅನಂತರ ಕೈದಿಯೊಂದಿಗೆ ಮಾತನಾಡಿ ಅವರು ತೆರಳಿದ್ದರು.
ಅನಂತರ ಕಾರಾಗೃಹದ ಸಿಬ್ಬಂದಿ, ಸಹಾಯಕ ಜೈಲರ್ ಸೇರಿ ಅವರು ತಂದಿದ್ದ ವಸ್ತುಗಳನ್ನು ಪರಿಶೀಲಿಸಿದಾಗ ಬಿಸ್ಕೇಟ್ ಮತ್ತು ಹಣ್ಣುಗಳ ಮಧ್ಯದಲ್ಲಿ ಗಾಂಜಾದಂತಹ ಸೊಪ್ಪುಗಳಿದ್ದವು.
ಬಳಿಕ ಜಿಲ್ಲಾಕಾರಾಗೃಹದ ಅಧೀಕ್ಷಕರಾದ ಸಿದ್ದರಾಮ ಪಾಟೀಲ ಅವರಿಗೆ ಸಿಬ್ಬಂದಿ ಮಾಹಿತಿ ನೀಡಿದ್ದು, ಮತ್ತೆ ಸಮರ್ಪಕವಾಗಿ ಪರಿಶೀಲಿಸಿದಾಗ ಬ್ಯಾಗ್ನಲ್ಲಿ ಹಣ್ಣು ಮತ್ತು ಬಿಸ್ಕೇಟ್ನ ಮಧ್ಯದಲ್ಲಿ 1 ಪ್ಲಾಸ್ಟಿಕ್ ತೊಟ್ಟೆಯಲ್ಲಿ 10ರಿಂದ 15 ಗ್ರಾಂನಷ್ಟು ಗಾಂಜಾದಂತೆ ತೋರುವ ಸೊಪ್ಪು ಕಂಡು ಬಂದಿತ್ತು. ನಿಷೇಧಿತ ವಸ್ತುಗಳನ್ನು ಬಿಸ್ಕೇಟ್ ಹಾಗೂ ಹಣ್ಣುಗಳ ಮಧ್ಯದಲ್ಲಿ ಸೇರಿಸಿ ಕಾರಾಗೃಹ ಒಳಗಡೆ ನುಸುಳಿಸಲು ಪ್ರಯತ್ನಿಸಿದ ವ್ಯಕ್ತಿಗಳ ವಿರುದ್ಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.