ಇಸ್ರೇಲ್ ಮೇಲೆ ಇರಾನ್ ಏಕಕಾಲಕ್ಕೆ 200ಕ್ಕೂ ಹೆಚ್ಚು ಕ್ಷಿಪಣಿಗಳಿಂದ ದಾಳಿ ನಡೆಸಿದೆ. ಇಸ್ರೇಲ್ನ ಪ್ರಮುಖ ನಗರಗಳಾದ ಇಸ್ಫಹಾನ್, ತಬ್ರಿಜ್, ಖೋರಮಾಬಾದ್ನಿಂದ ಇಸ್ರೇಲ್ ಗುರಿಯಾಗಿಸಿ ಈ ದಾಳಿ ಮಾಡಲಾಗಿದೆ.
ಇರಾನ್ ದಾಳಿ ಮಾಡುವ ಸಮಯ ಸನ್ನಿಹಿತದಲ್ಲಿದೆ ಎಂದು ಅಮೆರಿಕಾ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಇಸ್ರೇಲ್ ಮೇಲೆ ಇರಾನ್ ಭಯಾನಕ ದಾಳಿ ನಡೆಸಿದೆ.
ಹಮಾಸ್ ನಾಯಕರ ಹತ್ಯೆಗೆ ಪ್ರತಿಕಾರವಾಗಿ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಟೆಲ್ ಅವೀವ್ನಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಬಂದಿದ್ದು, ಸುರಕ್ಷಿತ ಸ್ಥಳಗಳಲ್ಲಿ ರಕ್ಷಣೆ ಪಡೆಯುವಂತೆ ಇಸ್ರೇಲ್ ತನ್ನ ದೇಶದ ನಾಗರಿಕರಿಗೆ ತಿಳಿಸಿದೆ.
ಭಾರತೀಯ ಕಾಲಮಾನ ರಾತ್ರಿ 10:08ರ ಸುಮಾರಿಗೆ ಇಸ್ರೇಲ್ ರಕ್ಷಣಾಪಡೆಗಳ ಗುರಿಯಾಗಿಸಿ ಇರಾನ್ ರಾಕೆಟ್ ದಾಳಿ ನಡೆಸಿದೆ ಎಂದು ಇಸ್ರೇಲಿ ವಿದೇಶಾಂಗ ಸಚಿವಾಲಯ ಹೇಳಿಕೊಂಡಿರುವುದಾಗಿ ವರದಿಯಾಗಿದೆ. ಸದ್ಯ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ತಿಳಿದುಬಂದಿಲ್ಲ. ಇಸ್ರೇಲ್ನ ಪ್ರಸಿದ್ಧ ಐರನ್ ಡೋಮ್ ಮತ್ತು ಆರೋ ರಕ್ಷಣಾ ವ್ಯವಸ್ಥೆಗಳಿಂದ ಕ್ಷಿಪಣಿಗಳನ್ನು ತಡೆಹಿಡಿಯಲು ಮುಂದಾಗಿದೆ. ಆದರೆ, ಜೆರು ಸಲೇಂ ಮತ್ತು ಇತರೆಡೆಗಳಲ್ಲಿ ಸ್ಫೋಟ ಸಂಭವಿಸಿವೆ.
ಇಸ್ರೇಲ್ ವಾಯುಪಡೆ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಸೇರಿದಂತೆ ಪ್ರಮುಖ ನಾಯಕರನ್ನು ಹತ್ಯೆಗೈದ ಬಳಿಕ ಇಸ್ರೇಲ್-ಇರಾನ್ ನಡುವಿನ ಯುದ್ಧ ಸ್ವರೂಪವು ಮತ್ತಷ್ಟು ತೀವ್ರಗೊಂಡಿದೆ.
ನಮ್ಮ ದಾಳಿ ಹುತಾತ್ಮರ ರಕ್ತಕ್ಕೆ ಪ್ರತೀಕಾರವಾಗಿದೆ. ಕ್ಷಿಪಣಿ ದಾಳಿಗೆ ಇರಾನ್ ಪ್ರತಿದಾಳಿಗೆ ಮುಂದಾಗಿದ್ದೇ ಆದರೆ, ನಮ್ಮ ಮುಂದಿನ ನಡೆ ಕಠಿಣವಾಗಿರುತ್ತದೆ ಎಂದು ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ ಎಚ್ಚರಿಕೆ ನೀಡಿದೆ.
ಕ್ಷಿಪಣಿ ದಾಳಿ ಸಿದ್ಧತೆ ನಡೆಸುತ್ತಿದೆ: ಅಮೆರಿಕಾ ಎಚ್ಚರಿಕೆ.
ಇರಾನ್ ಮತ್ತು ಹಿಜ್ಬುಲ್ಲಾ ಸೇರಿದಂತೆ ಮಧ್ಯಪ್ರಾಚ್ಯದಾದ್ಯಂತ ಅವುಗಳನ್ನು ಬೆಂಬಲಿಸುವ ಸೇನಾಪಡೆಗಳ ವಿರುದ್ಧದ ಸರಣಿ ದಾಳಿ ನಡೆದಿತ್ತು. ಇದಕ್ಕೆ ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಪ್ರತಿಜ್ಞೆ ಮಾಡಿತ್ತು. ಇದರ ಬೆನ್ನಲ್ಲೇ ಇಸ್ರೇಲ್ ವಿರುದ್ಧ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ ಎಂದು ಅಮೆರಿಕಾ ಎಚ್ಚರಿಕೆ ನೀಡಿತ್ತು.
ಈ ದಾಳಿಯ ವಿರುದ್ಧ ಇಸ್ರೇಲ್ ಅನ್ನು ರಕ್ಷಿಸಲು ನಾವು ರಕ್ಷಣಾತ್ಮಕ ಸಿದ್ಧತೆಗಳನ್ನು ಸಕ್ರಿಯವಾಗಿ ಬೆಂಬಲಿಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ, ಅಂತಹ ಕ್ರಮವು ಇರಾನ್ಗೆ ತೀವ್ರ ಪರಿಣಾಮಗಳನ್ನು ಬೀರುತ್ತದೆ ಎಂದೂ ಎಚ್ಚರಿಸಿದ್ದರು.