ಉಡುಪಿ:ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿರದೇ
ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ದೃಷ್ಠಿಯಿಂದ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ಸ್ವಯಂಪ್ರೇರಿತವಾಗಿ
ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಪ್ರತಿಯೊಬ್ಬರಿಗೂ ಮಾದರಿ ಆಗಬೇಕು ಎಂದು ಕುಂದಾಪುರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ ಹೇಳಿದರು.
ಅವರು ಬುಧವಾರ ನಗರದ ಪುರಭವನ (ಟೌನ್ಹಾಲ್)ನಲ್ಲಿ ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘ (ರಿ), ಗಸ್ತು ಅರಣ್ಯ
ಪಾಲಕರ ಮತ್ತು ವೀಕ್ಷಕರ ಸಂಘ (ರಿ) ಹಾಗೂ ರಕ್ತನಿಧಿ ಕೇಂದ್ರ ಜಿಲ್ಲಾ ಸರಕಾರಿ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಪಘಾತ ಹಾಗೂ ಇತರೆ ಕಾಯಿಲೆಗಳ ಕಾರಣಗಳಿಂದ ಆಪತ್ತಿನಲ್ಲಿರುವ ವ್ಯಕ್ತಿಯ ಜೀವವನ್ನು ಕಾಪಾಡುವಲ್ಲಿ ರಕ್ತದಾನವು ಪ್ರಮುಖವಾಗಿದೆ. ರಕ್ತದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಮಾಹಿತಿಯ ಕೊರತೆ ಇದ್ದು, ರಕ್ತದಾನದ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಿ ರಕ್ತದಾನದಂತಹ ಮಹತ್ವಪೂರ್ಣವಾದ ಕಾರ್ಯದಲ್ಲಿ ಭಾಗವಹಿಸುವಂತೆ ಪ್ರೇರೆಪಿಸಬೇಕು ಎಂದರು.
ಜಿಲ್ಲಾ ಸರ್ಜನ್ ಡಾ. ಹೆಚ್ ಅಶೋಕ್ ಮಾತನಾಡಿ, ಜಿಲ್ಲೆಯು ರಕ್ತದಾನದಲ್ಲಿ ಪ್ರಸಿದ್ಧಿ ಹೊಂದಿರುವ ಜೊತೆಗೆ ಜಿಲ್ಲೆಯ ಬ್ಲಡ್ ಬ್ಯಾಂಕ್ ಗಳು ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ತುರ್ತು ಸಂದರ್ಭದಲ್ಲಿ ಜೀವವನ್ನು ರಕ್ಷಿಸುವಲ್ಲಿ ರಕ್ತವು ಅತ್ಯಂತ ಅವಶ್ಯವಾಗಿದ್ದು, ರಕ್ತದಾನ ಮಾಡುವ ಮುಖೇನ ಒಬ್ಬರ ಪ್ರಾಣ ಉಳಿಸುವ ಮಹಾನ್ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.
ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಮ್ ಬಾಬು ಎಂ, ಮಾತನಾಡಿ, ರಕ್ತದಾನ ಶ್ರೇಷ್ಠ ದಾನವಾಗಿದ್ದು, ಸಂಸ್ಥೆಯು ಕಳೆದ 24 ವರ್ಷಗಳಿಂದ ಸತತವಾಗಿ ರಕ್ತದಾನ ಶಿಬಿರವನ್ನು ನಡೆಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಕೈಗೊಂಡು ಸಮಾಜಕ್ಕೆ ಮಾದರಿಯಾಗಬೇಕಿದೆ ಎಂದರು.
ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ವೀಕ್ಷಕರ ಸಂಘ (ರಿ) ದ ಜಿಲ್ಲಾ ಅಧ್ಯಕ್ಷ ಕೇಶವ ಪೂಜಾರಿ ಎಂ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘ (ರಿ) ದ ಜಿಲ್ಲಾ ಅಧ್ಯಕ್ಷ ನಾಗೇಶ ಬಿಲ್ಲವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾ ಕುಮಾರಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು, ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ಜಿಲ್ಲಾ ಗೌರವಾಧ್ಯಕ್ಷ ಪ್ರಕಾಶ್ಚಂದ್ರ, ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ವೀಕ್ಷಕರ ಸಂಘದ ಗೌರವಾಧ್ಯಕ್ಷ ಹೆಚ್ ದೇವರಾಜ ಪಾಣ, ಸಾಮಾಜಿಕ ಅರಣ್ಯ ವಿಭಾಗದ ಡಿ.ಸಿ.ಎಫ್ ರವೀಂದ್ರ
ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್, ಮೂಡುಬಿದ್ರೆ ಉಪವಿಭಾಗದ ಎ.ಸಿ.ಎಫ್ ಶ್ರೀಧರ್.ಪಿ, ಕುಂದಾಪುರ ಉಪವಿಭಾಗದ ಎ.ಸಿ.ಎಫ್ ಪ್ರಕಾಶ್ ಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟ ಪೂರ್ವ ಮಾಜಿ ಜಿಲ್ಲಾ ಅಧ್ಯಕ್ಷ ಸುಬ್ರಮಣ್ಯ ಶೇರಿಗಾರ್, ಸಂಘದ ಪದಾಧಿಕಾರಿಗಳು, ಸದಸ್ಯರು, ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕರುಣಾಕರ ಜೆ. ಆಚಾರ್ಯ ಸ್ವಾಗತಿಸಿ, ಪ್ರಶಾಂತ್ ಹಾವಂಜೆ ನಿರೂಪಿಸಿದರೆ, ಜಯರಾಮ ಎ ವಂದಿಸಿದರು.