ಉಡುಪಿ: ಕಡಲ ತೀರದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಜಲಚರಗಳ ಅಸ್ತಿತ್ವಕ್ಕೆ
ತೊಂದರೆಯಾಗುತ್ತಿದೆ. ಈ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕಡಲ ತೀರ ಸ್ವಚ್ಛತಾ ದಿನವನ್ನು ಆಚರಿಸಲಾಗುತ್ತಿದ್ದು,ಸಾರ್ವಜನಿಕರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಹೇಳಿದರು.
ಅವರು ಶನಿವಾರ ಕುಂದಾಪುರ ತಾಲೂಕಿನ ಕೋಡಿ ಸಮುದ್ರ ತೀರದಲ್ಲಿ ಅಂತರಾಷ್ಟ್ರೀಯ ಕಡಲ ತೀರ ಸ್ವಚ್ಚತಾ ದಿನದ ಅಂಗವಾಗಿ ಜಿಲ್ಲಾಡಳಿತ, ಅರಣ್ಯ ಇಲಾಖೆ, ಪರಿಸರ ಇಲಾಖೆ ಮತ್ತು ಕುಂದಾಪುರ ಪುರಸಭೆ ಆಶ್ರಯದಲ್ಲಿ ನಡೆದ ಕಡಲ ತೀರ ಸ್ವಚ್ಚತಾ ದಿನ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.
ಸಾರ್ವಜನಿಕರು ಅನುಪಯುಕ್ತ ಪ್ಲಾಸ್ಟಿಕ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಬೀದಿ ಬದಿ ಎಸೆಯುವುದರಿಂದ ಪರಿಸರ ಮಾಲಿನ್ಯ
ಆಗುವುದಲ್ಲದೇ, ಅವುಗಳು ಸಮುದ್ರ ತಲುಪಿ ಜಲಚರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ದೇಶನದಂತೆ 2 ವಾರಗಳ ಕಾಲ ಸ್ವಚ್ಚತಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ
ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸ್ವಚ್ಛತೆಯ ಧ್ಯೇಯ ವಾಕ್ಯವನ್ನು ಭೋಧಿಸಲಾಯಿತು. ನಂತರ ಕೋಡಿ ಕಡಲ ತೀರದಲ್ಲಿರುವ ತ್ಯಾಜ್ಯಗಳನ್ನು ವಿಂಗಡಿಸಿ ಸ್ವಚ್ಚ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಪ್ರತಿನಿಧಿ ಅಮೃತಾ ಗುಪ್ತಾ, ಪರಿಸರ ಇಲಾಖೆಯ ಪ್ರಾದೇಶಿಕ ನಿರ್ದೇಶಕ ರಂಗಸ್ವಾಮಿ, ಸಾಮಾಜಿಕ ಅರಣ್ಯದ ಅರಣ್ಯಾಧಿಕಾರಿ ರವೀಂದ್ರನಾಥ್ ಹಾಗೂ ಕುಂದಾಪುರ ಪುರಸಭೆಯ ಕಾರ್ಯ ನಿರ್ವಹಣಾಧಿಕಾರಿ ಆನಂದ, ಕುಂದಾಪುರ ಪುರಸಭೆಯ ಅಧಿಕಾರಿಗಳು ಹಾಗೂ ಸ್ವಚ್ಚತಾ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಪರಿಸರ ಇಲಾಖೆ ಹಾಗೂ ಬಿ.ಬಿ.ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಎನ್.ಎಸ್.ಎಸ್. ವಿದ್ಯಾರ್ಥಿಗಳು ಭಾಗವಹಿಸಿದ್ದರು.