ಉಡುಪಿ: ಸೇವೆಯ ಮೂಲಕ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅಂಬಾಗಿಲು ಕಕ್ಕುಂಜೆ ಸಮೀಪದ ಅನುಗ್ರಹ ಪಾಲನಾ ಕೇಂದ್ರದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕ್ರೈಸ್ತ ಸಮುದಾಯದ ಸೇವೆಯನ್ನು ಎಲ್ಲಾ ವ್ಯಕ್ತಿಗಳು ಗುರುತಿಸುತ್ತಾರೆ. ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ಹಾಗೂ ಸಾಮಾಜಿಕ ಸೇವೆ ಸಂಘಟನೆಗಳಲ್ಲಿ ಚುನಾಯಿತರಾದವರು ದೀನದಲಿತರ ಹಿಂದುಳಿದವರ ನೋವುಗಳಿಗೆ ಸ್ಪಂದಿಸಿ ಅವರ ಕೆಲಸವನ್ನು ಮಾಡಿಕೊಟ್ಟಾಗ ಅದಕ್ಕಿಂದ ದೊಡ್ಡ ಬಹುಮಾನ ಇನ್ನೊಂದಿಲ್ಲ. ಈ ಮೂಲಕ ಸಮಾಜದಲ್ಲಿ ಇನ್ನಷ್ಟು ಸೇವೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉಡುಪಿ-ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು, ಸಮಾಜದ ಎಲ್ಲಾ ವಿಚಾರಗಳನ್ನು ಅಧ್ಯಯನ ಮಾಡಿದಾಗ ಮಾತ್ರ ಸೇವೆಗೆ ನಿಜವಾದ ಅರ್ಥಲಭಿಸುತ್ತದೆ. ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ಶಿಕ್ಷಣದ ಮೂಲಕ ಸಜ್ಜನ ನಾಗರಿಕನ್ನಾಗಿ ಮಾಡುವ ಕೆಲಸ ಸಮುದಾಯದಿಂದ ನಡೆಯುತ್ತಿದ್ದು ಈ ಕಾರ್ಯ ಇನ್ನಷ್ಟು ಮುಂದುವರೆಯಲಿ ಎಂದರು. ವಿಧಾನಪರಿಷತ್ ಸದಸ್ಯ ಎಸ್ ಎಲ್ ಭೋಜೆಗೌಡ ಮಾತನಾಡಿದರು.
ಇದೇ ವೇಳೆ ನೂತನವಾಗಿ ಚುನಾಯಿತರಾದ ಜನಪ್ರತಿನಿಧಿಗಳಿಗೆ, ಹಾಗೂ ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಚುನಾಯಿತರಾದವರನ್ನು ಕೂಡ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾದ ಸಂತೋಷ್ ಕರ್ನೇಲಿಯೊ ವಹಿಸಿದ್ದರು.
ಮೈಸೂರು ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಇದರ ಮಾಜಿ ಅಧ್ಯಕ್ಷರಾದ ವೆರೋನಿಕಾ ಕರ್ನೇಲಿಯೊ ಪ್ರಾಸ್ತಾವಿಕ ಮಾತುಗಳನ್ನಾಡಿ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಜೆರಾಲ್ಡ್ ಫೆರ್ನಾಂಡಿಸ್ ಅಭಿನಂದನಾ ನುಡಿಗಳನ್ನಾಡಿದರು.
ಮೈಸೂರು ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಇದರ ಮಾಜಿ ಅಧ್ಯಕ್ಷರಾದ ವೆರೋನಿಕಾ ಕರ್ನೇಲಿಯೊ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಜೆರಾಲ್ಡ್ ಫೆರ್ನಾಂಡಿಸ್, ಕಥೊಲಿಕ್ ಸಭಾ ನಿಕಟಪೂರ್ವ ಅಧ್ಯಕ್ಷರಾದ ಮೇರಿ ಡಿ’ಸೋಜ, ಪ್ರಧಾನ ಕಾರ್ಯದರ್ಶಿ ಒಲಿವಿಯಾ ಜೆ. ಡಿಮೆಲ್ಲೊ ಉಪಸ್ಥಿತರಿದ್ದರು.
ಕೇಂದ್ರಿಯಸಮಿತಿಯ ರಾಜಕೀಯ ಸಂಚಾಲಕರಾದ ಎಲ್ರೋಯ್ ಕಿರಣ್ ಕ್ರಾಸ್ಟೊ ಸ್ವಾಗತಿಸಿ, ಎಡ್ವರ್ಡ್ ಲಾರ್ಸನ್ ಕಾರ್ಯಕ್ರಮ ನಿರೂಪಿಸಿದರು.