ಸೆ.3ರಿಂದ ಉಡುಪಿ ಜಿಲ್ಲಾ ಸಮಾವೇಶ, 26ನೇ ಉಚಿತ ವೈದ್ಯಕೀಯ ತಪಾಸಣೆ, ಮಾಹಿತಿ ಜಾಗೃತಿ ಶಿಬಿರ

ಉಡುಪಿ: ಸೇವಾಭಾರತಿ ಸೇವಾಧಾಮ ಮತ್ತು ದಿವ್ಯಾಂಗ ರಕ್ಷಣಾ ಸಮಿತಿ ಆಶ್ರಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿಶೇಷಚೇತನರ ಸಬಲೀಕರಣ ಇಲಾಖೆಗಳ ಸಹಯೋಗದೊಂದಿಗೆ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಪ್ರಯುಕ್ತ ಮೂರು ದಿನಗಳ ಉಡುಪಿ ಜಿಲ್ಲಾ ಸಮಾವೇಶ ಹಾಗೂ 26ನೇ ಉಚಿತ ವೈದ್ಯಕೀಯ ತಪಾಸಣೆ, ಮಾಹಿತಿ ಜಾಗೃತಿ ಶಿಬಿರವನ್ನು ಸೆಪ್ಟೆಂಬರ್ 3, 4 ಮತ್ತು 5ರಂದು ಉಡುಪಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಆಯೋಜಿಸಲಾಗಿದೆ ಎಂದು ದಿವ್ಯಾಂಗ ರಕ್ಷಣಾ ಸಮಿತಿಯ ಸಂಚಾಲಕ ವಿಜಯ ಕೊಡವೂರು ಹೇಳಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಟ್ರಸ್ಟಿ ಡಾ. ಜಿ ಶಂಕರ್ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಸೇವಾ ಭಾರತಿ ಕನ್ಯಾಡಿ ಇದರ ಅಧ್ಯಕ್ಷೆ ಸ್ವರ್ಣಗೌರಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಬಿರದಲ್ಲಿ ಫಲಾನುಭವಿಗಳಿಗೆ ಉಚಿತ ವೈದ್ಯಕೀಯ ತಪಾಸಣೆಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಅವರಿಗೆ ಯೋಗ, ಪ್ರಾಣಾಯಾಮ, ಒತ್ತಡ ಗಾಯ ನಿರ್ವಹಣೆ, ಆಪ್ತ ಸಮಾಲೋಚನೆ, ಮನೋರಂಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸೆ. 5ರಂದು ಗಾಲಿಕುರ್ಚಿ ರ್ಯಾಲಿ ಮೂಲಕ ಹಾಸಿಗೆ ಹಿಡಿದ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರನ್ನು ಮುಖ್ಯ ವಾಹಿನಿಗೆ ಬರುವಂತೆ ಮಾಡಿ, ಈ ಮೂಲಕ ಅವರಿಗೆ ಎಲ್ಲರಂತೆ ಬದುಕಲು ಧೈರ್ಯ ತುಂಬುವುದರ ಜೊತೆಗೆ ಜನ ಸಾಮಾನ್ಯರಿಗೆ ಬೆನ್ನುಹುರಿ ಅಪಘಾತದ ಬಗ್ಗೆ ಜಾಗೃತಿ ಮೂಡಿಸಲು ಗಾಲಿಕುರ್ಚಿ ರ್ಯಾಲಿಯನ್ನು ಬೆಳಿಗ್ಗೆ 10ಗಂಟೆಗೆ ಆಯೋಜಿಸಲಾಗಿದೆ. ಉಡುಪಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿಂದ ಆರಂಭಗೊಳ್ಳುವ ರ್ಯಾಲಿಯು ಚಿತ್ತರಂಜನ್ ಸರ್ಕಲ್ ಮುಖಾಂತರವಾಗಿ ಸಾಗಿ, ಸರ್ವಿಸ್ ಬಸ್ ಸ್ಟ್ಯಾಂಡ್, ಮೆಸ್ಕಾಂ ರಸ್ತೆ ಮೂಲಕ ಬಂದು ಆಸ್ಪತ್ರೆಯಲ್ಲಿ ಸಮಾಪನಗೊಳ್ಳಲಿದೆ ಎಂದು ಹೇಳಿದರು.