ಕೋಟೇಶ್ವರ :”ಸುಶಾನ್ ಟ್ರಸ್ಟ್ ಕೊಡ್ಲಾಡಿ” ಇದರ ಉದ್ಘಾಟನೆ ಹಾಗೂ ಕೊಡ್ಲಾಡಿ ಎಂ ಆನಂದ ಶೆಟ್ಟಿ ಮತ್ತು ಶ್ರೀಮತಿ ಸುಶೀಲಾ ಶೆಟ್ಟಿಯವರ 50ನೇ ಮದುವೆ ವಾರ್ಷಿಕೋತ್ಸವ ಸಮಾರಂಭದ ಭಾಗವಾಗಿ, ವಿಜ್ಞಾನದ ಯೋಚನೆ ಯೋಜನೆಗಳಿಗೆ ಪ್ರೇರಣೆ ಮತ್ತು ಪರಿಸರ ಕಾಳಜಿ ಧ್ಯೇಯೋದ್ದೇಶ ಇರಿಸಿಕೊಂಡಿರುವ “ಸುಶಾನ್ ಟ್ರಸ್ಟ್-ಕೊಡ್ಲಾಡಿ “ ಕೋಟೇಶ್ವರದ ಯುವ ಮೆರಿಡಿಯನ್ ಒಪೇರಾ ಪಾರ್ಕನಲ್ಲಿ ಉದ್ಘಾಟನೆ ಗೊಂಡಿತು.
ಹೆಸರಾಂತ ಜೈವಿಕ ವಿಜ್ಞಾನಿ , ಪರಿಸರ ಸಂರಕ್ಷಕರಾದ ಡಾ। ಸಂಜಯ್ ಗುಬ್ಬಿಯವರು ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.
ಯುವಪೀಳಿಗೆ ಹೇಗೆ ವನ ಮತ್ತು ವನಜೀವಿಗಳ ಕುತೂಹಲಗಳನ್ನು ಅನುಭವಿಸುತ್ತ ಅದರ ಕಾಳಜಿ ವಹಿಸಬೇಕೆಂದು ತಿಳಿಹೇಳಿದರು. ವನ್ಯಜೀವಿಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ. ವಿವರಿಸಿದರು.
ಅಧ್ಯಕ್ಷತೆವಹಿಸಿ ಉದ್ಘಾಟಿಸಿದ ಡಾ। ಅತುಲ್ ಕುಮಾರ್ ಶೆಟ್ಟಿ , ಮೂಕಾಂಬಿಕಾ ಕ್ಲಿನಿಕ್ , ಚಿತ್ತೂರು ಇವರು ಶುಭಹಾರೈಸಿ ಕುಟುಂಬದೊಡಗಿನ ಒಡನಾಟವನ್ನು ಮೆಲುಕುಹಾಕಿದರು.

ಏರುತ್ತಿರುವ ಜಾಗತಿಕ ತಾಪಮಾನದ ಈ ಕಾಲಘಟ್ಟದಲ್ಲಿ ವಿಜ್ಞಾನ ಮತ್ತು ಪರಿಸರಕಾಳಜಿಗಳಿಗೆ ತೊಡಗಿಸಿಕೊಳ್ಳಲು ಉದ್ದೇಶಿಸಿರುವ”ಸುಶಾನ್ ಟ್ರಸ್ಟ್”ನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕೊಡಮಾಡಿದ “ವಿಜ್ಞಾನ ಪ್ರೇರಕ” ಪ್ರಶಸ್ತಿಯನ್ನು ಹಿರಿಯ ವಿಜ್ಞಾನ ಲೇಖಕರಾದ ಶ್ರೀ ಕೊಳ್ಳೇಗಾಲ ಶರ್ಮರವರಿಗೆ ನೀಡಲಾಯಿತು. ಮತ್ತು “ ಪರಿಸರ ಪರಿಶ್ರಮ” ಪ್ರಶಸ್ತಿಯನ್ನು “ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಸಂಸ್ಥೆ (NECF)- ಮಂಗಳೂರಿಗೆ ನೀಡಲಾಯಿತು.ಸಂಸ್ಥೆಯ ಕಾರ್ಯದರ್ಶಿ ಶ್ರೀ ಶಶಿಧರ್ ಶೆಟ್ಟಿ ಪ್ರಶಸ್ತಿ ಸ್ವೀಕರಿದರು.


ಅರುಣ್ ಕೊಡ್ಲಾಡಿ ಟ್ರಸ್ಟನ ಧ್ಯೇಯೋದ್ದೇಶಗಳನ್ನು ವಿವರಿಸಿದರು.ಡಾ। ಪ್ರವೀಣ್ ಶೆಟ್ಟಿ ಕೊಡ್ಲಾಡಿ ಸ್ವಾಗತಿಸಿದರೆ, ಕಿರಣ್ ಕೊಡ್ಲಾಡಿ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ, ಡಾ। ಶಂಕರ್ ಶೆಟ್ಟಿ ವಂದಿಸಿದರು. ಶ್ರೀಯುತ ವಸಂತ್ ಶೆಟ್ಟಿ ನಿರೂಪಿಸಿದರು.













