ಮಂಗಳೂರು: ಬಣ್ಣದ ಮಾಲಿಂಗ ಅವರು ಚೌಕಿಗೆ ಬಂದು ತಪಸ್ಸಿನಂತೆ ವೇಷ ಹಾಕುವುದನ್ನು ಕಂಡಿದ್ದೇನೆ. ಅವರು ಬದುಕಿದ್ದಾಗಲೇ ದಂತಕತೆಯಾಗಿದ್ದವರು. ಈ ದಂತಕಥೆಯನ್ನು ಅವರ ಪ್ರತಿಮೆ ಮೂಲಕ ಇತಿಹಾಸ ಮಾಡಿದ ರಂಗಕರ್ಮಿ ಜೀವನ್ ರಾಮ್ ಸುಳ್ಯ ಅವರ ಸಾಧನೆ ಪ್ರಶಂಸನೀಯ, ಇದು ರಂಗಮನೆಯ ಹೆಗ್ಗಳಿಕೆಯಾಗಿದೆ ಎಂದು ಡಾ.ಮೋಹನ್ ಆಳ್ವ ಹೇಳಿದರು.
ಅವರು ಭಾನುವಾರ ಸುಳ್ಯದ ಸಾಂಸ್ಕೃತಿಕ ಕಲಾಕೇಂದ್ರ ರಂಗ ಮನೆಯಲ್ಲಿ ಹಮ್ಮಿಕೊಂಡ ಯಕ್ಷ ಸಂಭ್ರಮ ಕಾರ್ಯಕ್ರಮದಲ್ಲಿ ಬಣ್ಣದ ಮಾಲಿಂಗ ಅವರ 15 ಅಡಿ ಎತ್ತರದ ಮಹಿರಾವಣ ವೇಷದ ಯಕ್ಷ ಪ್ರತಿಮೆಯನ್ನು ಉದ್ಘಾಟಿಸಿ ಮಾತನಾಡಿದರು.
ಜೀವನ್ ರಾಮ್ ಸುಳ್ಯ ಅವರೊಂದಿಗೆ ಕಳೆದ 32 ವರ್ಷಗಳಿಂದ ಸಾಂಸ್ಕೃತಿಕವಾಗಿ ಅರ್ಥಪೂರ್ಣ ಸಂಬಂಧವನ್ನು ಹೊಂದಿದ್ದೇನೆ. ಅವರು ನಮ್ಮ ವಿದ್ಯಾ ಸಂಸ್ಥೆಗೆ ನೀಡಿದ ಸಾಂಸ್ಕೃತಿಕ ಕೊಡುಗೆಗೆ ಅಭಿನಂದಿಸುತ್ತೇನೆ. ಬಣ್ಣದ ಮಾಲಿಂಗರ ಈ ಪ್ರತಿಮೆ ಪುನಃ ನಿರ್ಮಾಣ ಮಾಡಿರುವುದು ಅವರು ಕಲೆಯ ಮೇಲಿನ ಪ್ರೀತಿಗೆ ಸಾಕ್ಷಿ ಎಂದರು. ಸ್ತ್ರೀ ವೇಷ, ಪುಂಡು ವೇಷ ಹಾಕಿಯೇ ಮೇಲೆ ಬಂದವರು ಬಣ್ಣದ ಮಾಲಿಂಗ, ಗಾಣಿಗ, ಪಾಟಾಳಿ ಜನಾಂಗಕ್ಕೆ ಈ ಬಣ್ಣದ ವೇಷ ಒಲಿದಿದೆ ಎಂದು ನನ್ನ ಅಂಬೋಣ. ಅನೇಕ ಪ್ರಸಿದ್ಧ ಕಲಾವಿದರು ಈ ಸಮುದಾಯದಲ್ಲಿ ಬಂದಿದ್ದಾರೆ. ಈ ಬಗ್ಗೆ ದಾಖಲಿಕರಣ ನಡೆದಿರುವುದು ಸಂತೋಷ ತಂದಿದೆ. ತಾಳಮದ್ದಲೆ ಕಿವಿ ಮೂಗಿಗೆ ತಂಪು. ಬಯಲಾಟ ಕಣ್ಣಿಗೆ ತಂಪು. ಇದು ಯಕ್ಷಗಾನ ಪ್ರೇಮಿಗಳ ಎರಡು ಕಣ್ಣುಗಳಿದ್ದಂತೆ ಎಂದು ಡಾ. ಮೋಹನ್ ಆಳ್ವ ಬಣ್ಣಿಸಿದರು.
ಯಕ್ಷಗಾನದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ: ಡಾ. ತಲ್ಲೂರು
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ ಖ್ಯಾತ ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ ಅವರು ಯಕ್ಷಗಾನದ ದಂತಕಥೆ ಬಣ್ಣದ ಮಾಲಿಂಗ ಅವರ ಪುತ್ತಳಿಯನ್ನು ಸ್ಥಾಪಿಸುವುದರ ಮೂಲಕ ಯಕ್ಷಗಾನದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಈ ಅರ್ಥಪೂರ್ಣ ಕಾರ್ಯಕ್ಕಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪರವಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು.
ಜೀವನ ರಾಮ್ ಅವರಿಗೆ ಕಲೆ ರಕ್ತಗತವಾಗಿ ಬಂದಿರುವಂತಾಹುದ್ದು. ಅವರ ತಂದೆ ಸುಜನಾ ಸುಳ್ಯ ಅವರು ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯಗಾರರಾಗಿದ್ದಾರೆ. ಜೀವನ ರಾಮ್ ಅವರ ತಾಯಿ ಕೂಡ ಕಲಾಪೋಷಕರಾಗಿದ್ದರು. ಜೀವನರಾಮ್ ಅವರ ಮಗ ಕೂಡ ಪ್ರತಿಭಾವಂತ ಕಲಾವಿದನಾಗಿದ್ದಾನೆ. ಒಟ್ಟಿನಲ್ಲಿ ಜೀವನರಾಮ್ ಅವರ ಕುಟುಂಬವೇ ಕಲಾ ಸೇವೆಗೆ ಟೊಂಕ ಕಟ್ಟಿ ನಿಂತಿದೆ. ಕಲೆಯನ್ನೇ ಉಸಿರನ್ನಾಗಿಸಿಕೊಂಡಿದೆ.
ಜೀವನರಾಮ್ ಇವತ್ತು ಅತ್ಯಂತ ಶ್ರೇಷ್ಠವಾದ ಕೆಲಸವನ್ನು ಮಾಡಿದ್ದಾರೆ ಎಂದು ಅವರು ಪ್ರಶಂಸಿದರು. ಬಣ್ಣದ ಮಾಲಿಂಗ ಅವರು ತೆಂಕುತಿಟ್ಟಿನ ಸರ್ವಶ್ರೇಷ್ಠ ಬಣ್ಣದ ವೇಷಧಾರಿ. ಅವರ ನೆನಪಿನಲ್ಲಿ ಬಣ್ಣದ ವೇಷದ ಪ್ರತಿಮೆಯನ್ನು ಈ ಕಲಾ ಶಾಲೆಗೆ ಭೇಟಿ ನೀಡುವ ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಜೀವನರಾಮ್ ನಾಟಕದವರು. ನಾವು ಯಕ್ಷಗಾನದವರು. ನಾಟಕ ಮತ್ತು ಯಕ್ಷಗಾನ ಎಂಬ ಭೇದ ಇಲ್ಲದ ರೀತಿಯಲ್ಲಿ ನಾವು ಇಲ್ಲಿ ಸೇರಿಕೊಂಡಿದ್ದೇವೆ. ನಾಟಕ ಮತ್ತು ಯಕ್ಷಗಾನಗಳು ಹೇಗೆ ಜೊತೆಗೂಡಿ ಸಾಗಬೇಕು ಎಂಬುದಕ್ಕೆ ಜೀವನ ರಾಮ್ ಅವರ ಕಲಾಕೈಂಕರ್ಯವೇ ಸಾಕ್ಷಿ ಎಂದು ಅವರು ಅಭಿಪ್ರಾಯಪಟ್ಟರು.
ಇವತ್ತು ಜೀವನರಾಮ್ ಅವರು ಬಹುಮೌಲ್ಯಯುತವಾದ ವನಜಾ ರಂಗಮನೆ ಪ್ರಶಸ್ತಿಯನ್ನು ಪ್ರಸಿದ್ಧ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರಿಗೆ ಕೊಡುತ್ತಿದ್ದಾರೆ. ಇದೊಂದು ಅಪೂರ್ವ ಸಂದರ್ಭ. ಬಣ್ಣದ ಮಾಲಿಂಗರು ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರ ಗುರುಗಳು. ಅಲ್ಲದೆ, ಜೀವನರಾಮ್ ಅವರ ತಂದೆ ಸುಜನಾ ಸುಳ್ಯ ಅವರ ಜೊತೆಗೆ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರು ಕಟೀಲು ಮೇಳದಲ್ಲಿ ತಿರುಗಾಟ ನಡೆಸಿದ್ದಾರೆ. ಇವತ್ತು ಒಂದು ರೀತಿಯಲ್ಲಿ ಗುರುಶಿಷ್ಯ ಸಂಭ್ರಮ. ನಾನಾಗಲಿ ಮೋಹನ ಆಳ್ವರಾಗಲಿ, ಇಲ್ಲಿ ನೆರೆದಿರುವ ಕಲಾವಿದರಾಗಲಿ ಎಲ್ಲರೂ ಇಲ್ಲಿ ಜೊತೆ ಸೇರಿದ್ದೇವೆ. ಹೀಗೆ ಎಲ್ಲರನ್ನೂ ಜೊತೆ ಸೇರಿಸುವುದೇ ಕಲೆಯ ಸಾರ್ಥಕತೆ. ಕಲೆ ಎಂದರೆ ಕಲೆಯುವುದು ಎಂದರ್ಥ. ಅಂಥ ಸಾರ್ಥಕ ಕೆಲಸವನ್ನು ಜೀವನರಾಮ್ ಮಾಡಿದ್ದಾರೆ ಎಂದು ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಕಲಾ ನಿರ್ದೇಶಕ , ಬಿಗ್ಬಾಸ್ ಖ್ಯಾತಿಯ ಅರುಣ್ ಸಾಗರ್ ಮಾತನಾಡಿ ದ.ಕನ್ನಡ ಮಣ್ಣಿನಲ್ಲಿ ಕಲೆಯ ಸಾಮ್ರಾಜ್ಯವೇ ನಿಂತಿದೆ. ನಾನಿಂದು ನಿಮ್ಮೆದುರು ಕಲಾವಿದನೆಂದು ಅನಿಸಿಕೊಳ್ಳಲು ಯಕ್ಷಗಾನ, ರಂಗಭೂಮಿಯ ಪ್ರೇರಣೆಯೆ ಕಾರಣ ಎಂದರು. ಬಣ್ಣದ ಮಾಲಿಂಗ , ಶೇಣಿ, ಸಾಮಗ ಮೊದಲಾದ ಮಹಾನ್ ಕಲಾವಿದರು ಪೌರಾಣಿಕ ಪಾತ್ರಗಳ ಮೂಲಕ ಜನರಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಸಿದವರು. ಯಕ್ಷಗಾನ ಇದು ಕೃಷಿಕರು ಕಟ್ಟಿದ ಕಲೆ ಇಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಂಗಮನೆ ಅಮ್ಮ ವನಜಾಕ್ಷಿ ಜಯರಾಮ ನೆನಪಿನ ‘ ವನಜ ರಂಗಮನೆ ಪ್ರಶಸ್ತಿ ೨೦೨೪’ ನ್ನು ತೆಂಕತಿಟ್ಟಿನ ಪ್ರಸಿದ್ಧ ಬಣ್ಣದ ಕಲಾವಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿ ಅವರಿಗೆ ಪ್ರಧಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಂಗಮನೆಯ ಅಧ್ಯಕ್ಷ ಜೀವನ್ ರಾಮ್ ಸುಳ್ಯ ಉಪಸ್ಥಿತರಿದ್ದರು.