ಸುಳ್ಯ: ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ; ಸಹಕಾರಿ ಸಂಘದ ಉದ್ಯೋಗಿ ಮೃತ್ಯು.

ಸುಳ್ಯ: ಸುಳ್ಯದ ಪೈಚಾರು-ಸೋಣಾಂಗೇರಿ ರಸ್ತೆಯ ಆರ್ತಾಜೆ ಎಂಬಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವಿನ ಅಪಘಾತದಲ್ಲಿ ಐವರ್ನಾಡು ಸಹಕಾರಿ ಸಂಘದ ಉದ್ಯೋಗಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.

ಐವರ್ನಾಡು ಗ್ರಾಮದ ಪಾಲೆಪ್ಪಾಡಿ, ನಿವಾಸಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಲೆಕ್ಕಿಗ ಬೋಜಪ್ಪ (56) ಮೃತರು.

ಸುಳ್ಯದಿಂದ ಎಲಿಮಲೆ ಕಡೆಗೆ ಹೋಗುತ್ತಿದ್ದ ಬುಲೆಟ್ ಹಾಗೂ ಐವರ್ನಾಡು ಸುಳ್ಯಕ್ಕೆ ಬರುತ್ತಿದ್ದ ಬೋಜಪ್ಪರ ಬೈಕ್‍ ಆರ್ತಾಜೆ ಎಂಬಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಬೋಜಪ್ಪ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತರಾಗಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಮೂವರು ಸಹೋದರರು, ಒಬ್ಬರು ಸಹೋದರಿ ಇದ್ದಾರೆ.

ಬುಲೆಟ್ ಬೈಕ್ ಸವಾರ ನೆಲ್ಲೂರು ಕೆಮ್ರಾಜೆ ಗ್ರಾಮದ ಮಂದ್ರಪ್ಪಾಡಿಯ ವಸಂತ ಮತ್ತು ಅರುಣ್ ಅವರಿಗೂ ಕೂಡ ಗಾಯಗಳಾಗಿದ್ದು, ಅವರು ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಎರಡೂ ಬೈಕ್ ಗಳು ಜಖಂಗೊಂಡಿವೆ. ಸುಳ್ಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.