ಸೀಟು ವಂಚಿತ: ಎಂಬಿಬಿಎಸ್ ವಿದ್ಯಾರ್ಥಿಗೆ 10ಲಕ್ಷ ರೂ. ಪರಿಹಾರ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ.

ಬೆಂಗಳೂರು: ಎಂಬಿಬಿಎಸ್ ವಿದ್ಯಾರ್ಥಿಗೆ ಕ್ರೀಡಾ ಕೋಟಾದ ಬದಲು ಖಾಸಗಿ ಸೀಟಿಗೆ ತಪ್ಪಾಗಿ ವರ್ಗೀಕರಿಸಿದ್ದರಿಂದ ಆಗಿರುವ ನಷ್ಟ ಸರಿದೂಗಿಸಲು 10 ಲಕ್ಷ ರೂ. ಪರಿಹಾರ ಪಾವತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನಗರದ ಎಚ್‌ಎಸ್‌ಆರ್‌ ಲೇಔಟ್‌ನ ಚೆಸ್‌ ಆಟಗಾರ್ತಿ ಸಂಜನಾ ರಘುನಾಥ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಅರ್ಜಿದಾರರು ವರ್ಷಕ್ಕೆ ಸರಿ ಸುಮಾರು 11,88,000 ರೂ.ಗಳನ್ನು ಪಾವತಿಸಿದ್ದಾರೆ. ಪ್ರಾಧಿಕಾರದ ನಿಯಮ ಬಾಹಿರ ಕ್ರಮದಿಂದ ಅರ್ಜಿದಾರರು ಎಂಬಿಬಿಎಸ್ ಕೋರ್ಸ್ ಗೆ ಹೆಚ್ಚುವರಿ ವೆಚ್ಚ ಮಾಡುವಂತಾಗಿದೆ. ಇದು ಅರ್ಜಿದಾರರ ಹಕ್ಕು ಮತ್ತು ಅವರ ಭವಿಷ್ಯದ ಮೇಲೆ ಪರಿಣಾಮ ಬೀರಿದೆ ಎಂದು ನ್ಯಾಯಾಲಯ ಹೇಳಿತು.

ಅರ್ಜಿದಾರರು ಕ್ರಿಡಾ ಕೋಟಾದ ಸೀಟು ಪಡೆಯುವ ಅರ್ಹತೆಗಳಲ್ಲಿ ಪಿ-1 ಶ್ರೇಣಿಗೆ ಅರ್ಹರಿದ್ದಾರೆ. ಆದರೆ, ತಪ್ಪಾಗಿ ಅವರಿಗೆ ಪಿ-5 ಶ್ರೇಣಿ ನೀಡಲಾಗಿದೆ. ನಿಯಮಗಳ ಪ್ರಕಾರ ಅದು ತಪ್ಪು ಮತ್ತು ಆ ವರ್ಗೀಕರಣ ಊರ್ಜಿತವಾಗದು. ವರ್ಗೀಕರಣ ಸಂಬಂಧ 2023ರ ಜೂ.23ರಂದು ಹೊರಡಿಸಿರುವ ಸುತ್ತೋಲೆ 2006ರ ನಿಯಮಕ್ಕೆ ವಿರುದ್ಧವಾಗಿದೆ.

ಅರ್ಜಿದಾರರು ಖಾಸಗಿ ಸೀಟಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಶೈಕ್ಷಣಿಕ ತರಬೇತಿ ಹೊರತಾಗಿ ಕ್ರೀಡೆಯನ್ನು ಮುಂದುವರಿಸಲು ಆಗಿರುವ ಖರ್ಚು ಮತ್ತು ಸಮಯದ ಪ್ರಮಾಣವನ್ನು ನ್ಯಾಯಾಲಯ ಪರಿಗಣಿಸಿತು.

ವೈದ್ಯೆಯಾಗುವ ಆಕಾಂಕ್ಷೆ ಹೊಂದಿದ್ದ ಸಂಜನಾ, 2022-23ನೇ ಸಾಲಿನ ನೀಟ್‌ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕಿಂಗ್ ಗಳಿಸಿದ್ದರು. ಆದರೆ, ಅವರ ಅರ್ಹತೆಗೆ ತಕ್ಕಂತೆ ಕೆಇಎ ಶ್ರೇಣಿ ನೀಡದ ಕಾರಣ ಸೀಟು ವಂಚಿತರಾಗಿರುವುದಾಗಿ ಅರ್ಜಿದಾರರ ಪರ ವಕೀಲ ಎಂ.ಪಿ.ಶ್ರೀಕಂಠ ವಾದ ಮಂಡಿಸಿದರು.