ಉಡುಪಿ: ಸಿಎನ್‌ಜಿ ಇಂಧನ ಆಧಾರಿತ ವಾಹನಗಳು ಮತ್ತು ರಿಕ್ಷಾಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಅದಕ್ಕೆ ಅನುಗುಣವಾಗಿ ಸಿಎನ್‌ಜಿ ಪೂರೈಕೆ ಬಂಕ್ ಗಳು ಇಲ್ಲದ ಕಾರಣ ಆಗಾಗ ಇಂಧನ ಕೊರತೆ ಎದುರಾಗುತ್ತಿದೆ. ಇದರಿಂದಾಗಿ ರಿಕ್ಷಾ ಚಾಲಕರು ಭಾರೀ ಸಮಸ್ಯೆ ಎದುರಿಸುತ್ತಿದ್ದು, ಬಾಡಿಗೆ ಬಿಟ್ಟು ಬಂಕ್‌ಗಳ ಮುಂದೆ ದಿನವಿಡೀ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಕೆಲವು ದಿನಗಳಿಂದ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದ್ದು, ವಾಹನ ಚಾಲಕರು ಗ್ಯಾಸ್ ಸಿಗದೆ ಪರದಾಡುವಂತಾಗಿದೆ. ಇದಕ್ಕೆ ದಸರಾ ರಜೆ ನಿಮಿತ್ತ ರಾಜ್ಯದ ಬೇರೆ ಬೇರೆ ಭಾಗದ ಜನರು ದೊಡ್ಡ ಮಟ್ಟದಲ್ಲಿ ಪ್ರವಾಸಕ್ಕಾಗಿ ಕರಾವಳಿಗೆ ಬಂದಿದ್ದು ಕಾರಣ ಎನ್ನಲಾಗುತ್ತಿದೆ. ಬೇರೆ ಬೇರೆ ಭಾಗಗಳಿಂದ ಬಂದವರು ಇಲ್ಲಿ ಅನಿಲ ತುಂಬಿಕೊಳ್ಳುತ್ತಿರುವುದರಿಂದ ಮೊದಲೇ ಕಡಿಮೆ ಪ್ರಮಾಣದಲ್ಲಿರುವ ಅನಿಲ ನಿತ್ಯ ಬಳಕೆದಾರರಿಗೆ ಸಿಗದೆ ಸಮಸ್ಯೆಯಾಗಿದೆ ಎನ್ನಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕೋಟೇಶ್ವರ, ಗುಂಡಿಬೈಲು, ಮಲ್ಪೆ, ಬ್ರಹ್ಮಾವರ, ಪಡುಬಿದ್ರೆ ಸೇರಿದಂತೆ ಕೆಲವೇ ಕೆಲವು ಕಡೆಗಳಲ್ಲಿ ಸಿಎನ್‌ಜಿ ಕೇಂದ್ರಗಳಿವೆ.
ಇರುವಂತಹ ಬಹುತೇಕ ಎಲ್ಲ ಸಿಎನ್‌ಜಿ ಬಂಕ್ ಗಳಲ್ಲಿ ಬೇಡಿಕೆಯಷ್ಟು ಪೂರೈಕೆ ಆಗದೇ ಇರುವುದು ಸಮಸ್ಯೆಗೆ ಕಾರಣವಾಗಿದೆ. ಅದರ ಜತೆಗೆ ಸಿಎನ್‌ಜಿ ಗ್ಯಾಸ್ ಬಳಸುವ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ಹಿಂದೆ ಸಮಸ್ಯೆ ತಲೆದೋರಿದಾಗ ಸಂಸದ ಕೋಟ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಅವರ ಭರವಸೆ ಇನ್ನೂ ಈಡೇರಿಲ್ಲ. ಸಂಬಂಧಪಟ್ಟ ಇಲಾಖೆ ತಕ್ಷಣ ಇತ್ತ ಕಡೆ ಗಮನಹರಿಸಬೇಕಿದೆ.