ಸಿಎಂ ಹೇಳಿಕೆಯಿಂದ ತಲೆತಗ್ಗಿಸುವಂತಾಗಿದೆ: ಜನಾರ್ದನ ರೆಡ್ಡಿ

ಉಡುಪಿ: ಕಾಶ್ಮೀರದ ಪಹಲ್ಲಾಮ್‌ನಲ್ಲಿ ನಡೆದ ಘಟನೆಯನ್ನು ಕೆಲವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ದುಷ್ಟ ಸಂಹಾರ ಮಾಡುವ ಸಂದೇಶ ನೀಡಿದ್ದಾನೆ. ಅದರಂತೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.

ಉಡುಪಿ ಶ್ರೀಕೃಷ್ಣ ದರ್ಶನದ ಬಳಿಕ ಮಾತನಾಡಿದ ಅವರು, ಭಾರತ ಶಾಂತಿಯುತವಾಗಿರಬೇಕಾದರೆ ದುಷ್ಟರ ಸಂಹಾರವಾಗಬೇಕು. ಸನಾತನ ಧರ್ಮ ಮತ್ತು ಆಧ್ಯಾತ್ಮಿಕ ನೆಲೆಯ ಭಾರತದಲ್ಲಿ ಶಾಂತಿ ಸ್ಥಾಪನೆಯಾಗಬೇಕು ಎಂದರು.

ಪಾಕಿಸ್ಥಾನ ದೇಶದ ಪರ ಹೇಳಿಕೆ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯಿಂದ ತಲೆತಗ್ಗಿಸುವ ಪರಿಸ್ಥಿತಿ ಬಂದಿದೆ. ಅಂತಹ ಹೇಳಿಕೆ ನೀಡುವುದು ಮೂರ್ಖತನ. ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಅಧಿಕಾರ ಶಾಶ್ವತ ಅಲ್ಲ. ಯಾವಾಗ ಇಳಿದು ಹೋಗುತ್ತಾರೋ ಗೊತ್ತಿಲ್ಲ. ವಯಸ್ಸು 76 ಆಗಿದೆ, ಈ ಕ್ಷಣದಲ್ಲಾದರೂ ಭರತ ಭೂಮಿಯ ಬಗ್ಗೆ ಸರಿಯಾಗಿ ಮಾತನಾಡಿ ಪುಣ್ಯ ಕಟ್ಟಿಕೊಳ್ಳುವಂತೆ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.