ಉಡುಪಿ: ರಾಜ್ಯದಲ್ಲಿ ನಡೆದ ಸಿಇಟಿ ಪರೀಕ್ಷೆಯಲ್ಲಿ ಕೆಲವು ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಯನ್ನು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಖಂಡಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀಕಾಂತ್ ಉಪಾಧ್ಯಾಯ, ರಾಜ್ಯದಲ್ಲಿ ನಾಲ್ಕು ಜಿಲ್ಲೆಯಲ್ಲಿ ಜನಿವಾರ ತೆಗೆಸಿದ ಘಟನೆ ಬೆಳಕಿಗೆ ಬಂದಿದೆ. ಆದರೆ ಇದು ಇನ್ನೆಷ್ಟು ಕಡೆಗಳಲ್ಲಿ ನಡೆದಿದೆ ಎಂಬುದು ತಿಳಿದಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಇಂತಹ ಮಾನಸಿಕ ಮನೋಸ್ಥಿತಿ ನಿರ್ಮಾಣವಾಗುತ್ತಿರುವುದು ದೇಶದ ಅಖಂಡತೆಗೆ ಕೆಡಕಾಗಬಹುದು. ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಸಮಾಜದ ನೈತಿಕತೆಯ ಮೇಲೆ ಕ್ರೌರ್ಯ, ದಬ್ಬಾಳಿಕೆ ಮಿತಿ ಮೀರಿ ನಡೆಯುತ್ತಿದೆ. ಸರಕಾರವು ಇನ್ನಾದರೂ ಎಚ್ಚೆತ್ತು ಇಂತಹ ದುರ್ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ಹೀಗೆ ಮುಂದುವರಿದಲ್ಲಿ ಶಾಂತ ಚಿತ್ತರಾದ ನಾವು ಉಗ್ರಚಿತ್ರರಾಗಿ, ಉಗ್ರ ಹೋರಾಟಕ್ಕೂ ಸಿದ್ಧರಾಗಬೇಕಾಗುತ್ತದೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಬಳಿಯುವ ನೀತಿಯನ್ನು ನಾವು ಖಂಡಿಸುತ್ತೇವೆ. ಪರೀಕ್ಷಾ ವಂಚಿತ ಎಲ್ಲಾ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ ಮಾಡಿಕೊಟ್ಟು, ಅವರ ಭವಿಷ್ಯಕ್ಕೆ ಸರಕಾರ ನೆರವಾಗಬೇಕು. ಹಾಗೆಯೇ ದಬ್ಬಾಳಿಕೆಯನ್ನು ತೋರಿಸಿದ ಅಧಿಕಾರಿವರ್ಗಕ್ಕೆ ಉಗ್ರ ಶಿಕ್ಷೆಯಾಗಬೇಕು. ಇದು ಎರಡನ್ನೂ ಮಾಡದಿದ್ದಲ್ಲಿ ಸಮಸ್ತ ವಿಪ್ರ ಸಮಾಜ ಸನಾತನ ಹಿಂದೂ ಧರ್ಮದವರೊಂದಿಗೆ ಸೇರಿ, ಉಗ್ರ ಹೋರಾಟಕ್ಕೆ ಕರೆಕೊಡಬೇಕಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸಂದೀಪ್ ಕುಮಾರ್ ಮಂಜ, ಚಂದ್ರಕಾಂತ್ ಭಟ್, ಜಯರಾಮ ಆಚಾರ್ಯ, ಗಣೇಶ್ ಹೆಬ್ಬಾರ್, ವೈ.ಗಣೇಶ್, ಪಾಂಡುರಂಗ ಲಾಗ್ಟನ್‌ಕರ್, ಮಂಜುನಾಥ್ ಹೆಬ್ಬಾರ್ ಉಪಸ್ಥಿತರಿದ್ದರು.












