ಸಾಕ್ಷಿಗಳ ಜೊತೆ ಆಯುರ್ವೇದದ ಬಗೆಗೆ ಜನರಿಗೆ ಖಾತರಿ ಪಡಿಸಬೇಕು: ಡಾ. ರೇವತಿ ಭಟ್

ವಿದ್ಯಾಗಿರಿ: 21ನೇ ಶತಮಾನದಲ್ಲಿ ಜನರಿಗೆ ಆಯುರ್ವೇದದ ಮಹತ್ವ ತಿಳಿಯುತ್ತಿರುವುದು ಸಂತಸದ ಬೆಳವಣಿಗೆ ಎಂದು ಆಳ್ವಾಸ್ ಹೆಲ್ತ್ ಸೆಂಟರ್‌ನ ಸ್ತ್ರೀರೋಗ ತಜ್ಞೆ ಡಾ. ರೇವತಿ ಭಟ್ ಹೇಳಿದರು. ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸ್ನಾತಕೋತ್ತರ ಪ್ರಸೂತಿ ತಂತ್ರ ಹಾಗೂ ಸ್ತ್ರೀರೋಗ ವಿಭಾಗದ ವತಿಯಿಂದ ಪ್ರಾಜ್ಞಾ ವಿಚಾರ ಸಂಕಿರಣ ಸಭಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ ‘ಎಂಡೊಮೆಟ್ರಿಯೊಸಿಸ್- ಒಂದು ಸಂಯೋಜಿತ ವಿಧಾನ’ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಆಯುರ್ವೇದ ಕ್ಷೇತ್ರದಲ್ಲಿ ಹೆಚ್ಚು ಕಾರ್ಯಗಾರ ಹಾಗೂ ವಿಚಾರ ಸಂಕಿರಣಗಳು ನಡೆಯಬೇಕು. ಇದರಿಂದ ಪಡೆದ ಜ್ಞಾನವನ್ನು ನಾವು ಇತರರಿಗೆ ತಿಳಿಸುವ ಅವಶ್ಯಕತೆ ಇದೆ. ಪ್ರಸ್ತುತ ವರ್ತಮಾನದಲ್ಲಿ ಜನರು ಸಾಕ್ಷಿಗಳನ್ನು ಹೆಚ್ಚು ನಂಬುತ್ತಾರೆ. ಹಾಗಾಗಿ ಸಾಕ್ಷಿಗಳ ಜೊತೆ ಆಯುರ್ವೇದದ ಬಗೆಗೆ ಜನರಿಗೆ ಖಾತರಿ ಪಡಿಸಬೇಕು ಎಂದು ಹೇಳಿದರು. ನಮ್ಮ ಹಿಂದಿನ ತಲೆಮಾರಿನ ಜನರಿಗೆ ಪ್ರಕೃತಿಯಲ್ಲಿ ದೊರೆಯುವ ಔಷಧಿಗಳ ಬಗ್ಗೆ ಅಪಾರ ಜ್ಞಾನವಿದ್ದರೂ ಅವರು ಆ ಜ್ಞಾನವನ್ನು ಮುಂದಿನ ತಲೆಮಾರಿಗೆ ಪಸರಿಸಿಲ್ಲ. ಆದರೆ ಈ ತಪ್ಪನ್ನು ನಾವು ಮಾಡಿದರೆ ಇದರಿಂದ ನಮ್ಮ ಮುಂದಿನ ಪೀಳಿಗೆಗೆ ನಷ್ಟವಾಗಲಿದೆ. ಹಾಗಾಗಿ ಇಂತಹ ಕಾರ್ಯಗಾರದಲ್ಲಿ ಪಡೆದ ಜ್ಞಾನವನ್ನು ನಾವು ಸಂಗ್ರಹಿಸಿ, ಪಸರಿಸಬೇಕು ಎಂದರು.

ಆಳ್ವಾಸ್ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ಯಶಸ್ಸಿನ ಹಿಂದೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವರ ಶ್ರಮವಿದೆ. ಇದನ್ನು ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು. ಕಾರ್ಯಗಾರದ ಮೊದಲ ಅವಧಿಯನ್ನು ಆಳ್ವಾಸ್ ವೈದ್ಯಕೀಯ ಕೇಂದ್ರದ ಸ್ತ್ರೀರೋಗ ತಜ್ಞೆ ಡಾ.ಹನಾ ಶೆಟ್ಟಿ ಹಾಗೂ ನಂತರದ ಅವಧಿಗಳನ್ನು ಕೇರಳದ ಸರಕಾರಿ ಆಯುರ್ವೇದ ವೈದ್ಯಕೀಯ ಕೇಂದ್ರದ ಹಿರಿಯ ವೈದ್ಯಕೀಯ ಅಧಿಕಾರಿ ಡಾ. ಮಿನಿ ಪಿ, ಸ್ನಾತಕೋತ್ತರ ಪ್ರಸೂತಿ ಹಾಗೂ ಸ್ತ್ರೀ ರೋಗ ವಿಭಾಗದ ಮುಖ್ಯಸ್ಥ ಡಾ. ಅಶೋಕನ್, ಜಾಮ್‌ನಗರ ವಿವಿಯ ಇನ್ಸ್ಟಿಟ್ಯೂಟ್ ಆಫ್ ಟೀಚಿಂಗ್ ಆ್ಯಂಡ್ ರಿಸರ್ಚ್ ಇನ್ ಆಯುರ್ವೇದದ ಸ್ನಾತಕೋತ್ತರ ಪ್ರಸೂತಿ ಹಾಗೂ ಸ್ತ್ರೀರೋಗ ವಿಭಾಗದ ಪ್ರಾಧ್ಯಾಪಕಿ ಡಾ ಶಿಲ್ಪಾ ಬಿ ಡೊಂಗಾ ನಡೆಸಿದರು. ದೇಶದ ವಿವಿಧ ಕಾಲೇಜುಗಳಿಂದ 80ಕ್ಕೂ ಅಧಿಕ ವಿದ್ಯಾರ್ಥಿಗಳು, ಪ್ರಾಧ್ಯಪಕರು ಭಾಗವಹಿಸಿದ್ದರು. ಆಳ್ವಾಸ್ ಹೆಲ್ತ್ ಸೆಂಟರ್‌ನ ಸ್ತ್ರೀರೋಗ ತಜ್ಞೆ ಡಾ.ಹನಾ ಶೆಟ್ಟಿ, ಸ್ನಾತಕೋತ್ತರ ಪ್ರಸೂತಿ ಹಾಗೂ ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ. ಅಶೋಕನ್ ಇದ್ದರು. ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಕವಿತಾ ಸ್ವಾಗತಿಸಿದರು. ವಿದ್ಯಾರ್ಥಿನಿ ಡಾ. ಕಾವ್ಯ ರಾವ್ ಹಾಗೂ ಡಾ. ಪ್ರವೀಣಾ ಕೆ ನಿರೂಪಿಸಿದರು.