ಸಂಪೂರ್ಣ ಹದಗೆಟ್ಟ ಶಾಂತಿನಗರ ಮುಖ್ಯರಸ್ತೆ

ಉಡುಪಿ: 80ನೇ ಬಡಗಬೆಟ್ಟು ಗ್ರಾಪಂ ವ್ಯಾಪ್ತಿಯ ಶಾಂತಿನಗರ ಮುಖ್ಯ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯಲ್ಲಿ ಹೊಂಡ ಗುಂಡಿಗಳು ಬಿದ್ದು ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ಎದುರಾಗಿದೆ.
ಇಲ್ಲಿಯ ರಸ್ತೆಯ ಅವ್ಯವಸ್ಥೆಯಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆಯ ಅಕ್ಕ ಪಕ್ಕದ ಮನೆಗಳಿಂದ ಬಟ್ಟೆ ತೊಳೆದ ನೀರು, ಕೊಳಚೆ ನೀರನ್ನು ರಸ್ತೆಗಳಿಗೆ ಹರಿಯಬಿಡಲಾಗುತ್ತಿದೆ. ಇದರಿಂದ ಪರಿಸರದಲ್ಲಿ ಗಬ್ಬುವಾಸನೆ ಹರಡಿದ್ದು, ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ಇಲ್ಲಿಯ ಸಮಸ್ಯೆಯನ್ನು ಜನಪ್ರತಿನಿಧಿಗಳು, ಪಂಚಾಯತ್ ನ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪಂಚಾಯತ್ ಮೌನಕ್ಕೆ ಶರಣಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ತಕ್ಷಣವೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ರಸ್ತೆಯನ್ನು ದುರಸ್ತಿ ಪಡಿಸಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಒತ್ತಾಯಿಸಿದ್ದಾರೆ.