ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಪೇಟೆಯಲ್ಲಿ ಪ್ರತ್ಯಕ್ಷವಾದ ಕಾಡಾನೆ;ಜನರಲ್ಲಿ ಆತಂಕ ಸೃಷ್ಟಿ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲೇ ಕಾಡಾನೆ ಓಡಾಟ ನಡೆಸಿದ ಘಟನೆ ರವಿವಾರ ಸಂಜೆ ವೇಳೆ ನಡೆದಿದೆ.

ಕುಕ್ಕೆ ಸುಬ್ರಹ್ಮಣ್ಯ ಸಮೀಪದ ದೇವರಗದ್ದೆ ಅರಣ್ಯ ಪ್ರದೇಶ ಭಾಗದಿಂದ ಈ ಒಂಟಿ ಸಲಗ ಆಗಮಿಸಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಯನ್ನು ಮರಳಿ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆಕಾಡಾನೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯ ವ್ಯಾಸಮಂದಿರ ಬಳಿಯಿಂದ ಸುಬ್ರಹ್ಮಣ್ಯ ಮಠದ ಸಮೀಪದ ಮೂಲಕ ಸಂಚರಿಸಿ, ಮತ್ತೆ ಅರಣ್ಯ ಭಾಗಕ್ಕೆ ತೆರಳಿದೆ.

ಕಾಡಾನೆ ವ್ಯಾಸಮಂದಿರದ ಸಮೀಪದಿಂದ ಹಾದು ಹೋಗುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಕಾಡಾನೆ ಕೆಲ ಹೊತ್ತು ದೇಗುಲದ. ಸಮೀಪದ ಪರಿಸದಲ್ಲಿ ಸಂಚರಿಸಿ ಕಾಡಿನತ್ತ ತೆರಳಿದೆ ಎಂದು ತಿಳಿದು ಬಂದಿದೆ.

ಕಾಡಾನೆ ಕುಕ್ಕೆ ಪೇಟೆಯಲ್ಲಿ ಜನಸಂಚಾರದ ದೇವಸ್ಥಾನ ಸಮೀಪದ ವಸತಿ, ಮಠದ ಪರಿಸರದಲ್ಲಿ ಸಂಚರಿಸಿದ್ದರಿಂದ ಭಕ್ತರು ಹಾಗೂ ಸ್ಥಳೀಯರು ಕೆಲಕಾಲ ಆತಂಕಕ್ಕೆ ಒಳಗಾದರು. ಸದ್ಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಟಿ ಜಾತ್ರೆ ನಡೆಯುತ್ತಿದ್ದು, ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿದೆ. ಇದರ ಜತೆಗೆ ಭಕ್ತರ ಸಂಖ್ಯೆಯೂ ಮಾಮೂಲಿಗಿಂತ ಹೆಚ್ಚಿದೆ.

ಕಾಡಾನೆ ಸುಬ್ರಹ್ಮಣ್ಯ ಪೇಟೆಗೆ ಬಂದ ಅಹಿತಿ ತಿಳಿಯುತ್ತಲೇ, ಪುತ್ತೂರು ಎ.ಸಿ ಜುಬಿನ್ ಮೊಹಪಾತ್ರ ಆನೆಯನ್ನು ತಕ್ಷಣ ಕಾಡಿಗಟ್ಟಲು ಬೇಕಾದ ಅಗತ್ಯ ಕ್ರಮಗಳಿಗೆ ಸೂಚಿಸಿದ್ದಾರೆ.

ಕುಕ್ಕೆ ಪೇಟೆಯಲ್ಲಿ ಜಾತ್ರೆಗಾಗಿ ಅಳವಡಿಸಿದ ಕಣ್ಣು ಕೊರೈಸುವ ವಿದ್ಯುತ್‌ ದೀಪಗಳು ಹಾಗೂ , ಬ್ಯಾಂಡ್ ಸದ್ದಿಗೆ ಬೆದರಿ ಒಂದು ಹಂತದಲ್ಲಿ ದಿಕ್ಕುಪಾಲಾಗಿ ಓಡಿತ್ತು . ಇನ್ನು ಆನೆಯನ್ನು ನೋಡಿ ಕೆಲ ಭಕ್ತರು ಅದರ ಬಳಿ ತೆರಳಿ ನಮಸ್ಕರಿಸುವುದು ಕಂಡು ಬಂತು . ಇದನ್ನು ಗಮನಿಸಿ ದೇವಸ್ಥಾನದ ವತಿಯಿಂದ ಈ ಕಾಡಾನೆಗೆ ನಮಸ್ಕರಿಸದಂತೆ ಎಚ್ಚರಿಕೆಯನ್ನು ಮೈಕ್‌ ಮೂಲಕ ನೀಡಲಾಯಿತು.ಆದರೆ ಕಾಡಾನೆ ಯಾರಿಗೂ ತೊಂದರೆ ನೀಡದೇ ಕಾಡಿನ ಹಾದಿ ಹಿಡಿದ ಹಿನ್ನಲೆ ಎಲ್ಲರೂ ಸಮಾಧನದ ನಿಟ್ಟುಸಿರು ಬಿಟ್ಟರು .

ಈ ಕಾಡಾನೆಯೂ ದೇಗುಲದ ಹೆಣ್ಣು ಸಾಕಾನೆ ಯಶಸ್ವಿನಿ ವಾಸನೆಗೆ ಬಂದಿರುವ ಸಾಧ್ಯತೆಯಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದು, ಇದು ಮರಳಿ ಬರುವ ಸಾಧ್ಯತೆಯ ಇರುವುದಾಗಿ ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಈ ಹಿನ್ನಲೆಯಲ್ಲಿ, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ರಾತ್ರಿ ವೇಳೆ ದೇಗುಲಕ್ಕೆ ಬರುವ ಭಕ್ತರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.