ಬೆಳಗಾವಿ : ಹಿಂದಿನ ಮಾದರಿಯಂತೆ ಜಿಲ್ಲಾ ಉಪ ನಿರ್ದೇಶಕರ ಮೂಲಕವೇ ಗೃಹಲಕ್ಷ್ಮೀ ಯೋಜನೆ ಹಣವನ್ನು ಎಲ್ಲ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಇಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮತನಾಡಿದ ಅವರು, ‘ತಾಲೂಕು ಪಂಚಾಯಿತಿ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಣ ರವಾನೆಯಾಗುತ್ತಿದ್ದು, ಉಪ ನಿರ್ದೇಶಕರ ಮೂಲಕ ಹಣ ಹಾಕಲಾಗುತ್ತಿದೆ. ಯೋಜನೆಗೆ ಹಣ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಿಲ್ಲ. ಈ ಸಂಬಂಧ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದು ಶೀಘ್ರದಲ್ಲೆ ಹಣ ಜಮಾ ಮಾಡಲು ಸೂಚನೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.ಶೀಘ್ರವೇ ಜನಸೇವೆಗೆ: ‘ದೇವರ ದಯೆಯಿಂದ ಸಂಪೂರ್ಣ ಗುಣಮುಖ ಆಗಿದ್ದೇನೆ. ವೈದ್ಯರು 6 ವಾರ ವಿಶ್ರಾಂತಿ ಹೇಳಿದ್ದಾರೆ. ಹಾಗಾಗಿ ಇನ್ನೆರಡು ವಾರಗಳಲ್ಲಿ ಪ್ರಯಾಣ ಆರಂಭಿಸಿ, ಸಾರ್ವಜನಿಕ ಜೀವನಕ್ಕೆ ಮರಳುವೆ. ಒಂದು ತಿಂಗಳು ತುಂಬಾ ಕಷ್ಟಕರವಾಗಿತ್ತು. ಕ್ಷೇತ್ರದ ಜನರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಶೀಘ್ರವೇ ಜನ ಸೇವೆಗೆ ಮರಳುವೆ’ ಎಂದು ಅವರು ತಿಳಿಸಿದರು.
ನಾನು 25 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವೆ. ಜನರ ಮಧ್ಯೆಯೇ ನನ್ನ ದೈನಂದಿನ ಜೀವನ ನಡೆಯುತ್ತಿದೆ. ಈಗಲೂ ದೂರವಾಣಿ ಮೂಲಕ ಜನರ ಸಂಪರ್ಕದಲ್ಲಿರುವೆ. ಜನರ, ದೇವರ ಆಶೀರ್ವಾದದಿಂದ ಸಂಪೂರ್ಣ ಗುಣಮುಖ ಆಗಿರುವೆ ಎಂದ ಅವರು, ಆರು ತಿಂಗಳ ಹಿಂದೆಯೇ ಮೈಕ್ರೋ ಫೈನಾನ್ಸ್ ಸಮಸ್ಯೆ ಬಗ್ಗೆ ತಿಳಿದಿತ್ತು. ನಾನು ತಕ್ಷಣವೇ ಜಿಲ್ಲಾಧಿಕಾರಿ, ನಗರ ಪೋಲೀಸ್ ಆಯುಕ್ತರ ಗಮನಕ್ಕೆ ತಂದಿದ್ದೆ, ಜೊತೆಗೆ ಮೈಕ್ರೋ ಫೈನಾನ್ಸ್ ಸಂಸ್ಥೆಯವರನ್ನು ಕರೆಸಿ ಮಹಿಳೆಯರಿಗೆ ತೊಂದರೆ ನೀಡಬಾರದು ಎಂದು ಹೇಳಿದ್ದೆ ಎಂದರು.












