ಉಡುಪಿ: ಯುವಜನತೆ ಕೃಷಿಯಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ಮಕ್ಕಳಲ್ಲಿ ಕೃಷಿ ಆಸಕ್ತಿ ಬೆಳೆಸುವುದು ಅಗತ್ಯ. ಶಿವಪಾಡಿ ವೈಭವ ಮೂಲಕ ಆರೋಗ್ಯ, ಕೃಷಿ, ಮನೋರಂಜನ ಮೇಳ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದು ಧರ್ಮಸ್ಥಳದ ಧಮಾರ್ಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಶಿವರಾತ್ರಿಯ ಅಂಗವಾಗಿ ದೇವಳದ ಅಭಿವೃದ್ಧಿ ಟ್ರಸ್ಟ್ ಹಾಗು ಶಿವಪಾಡಿ ವೈಭವ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಿರುವ ಐದು ದಿನಗಳ ಯಕ್ಷಗಾನ, ಕೃಷಿ, ಆರೋಗ್ಯ, ಆಹಾರ ಮೇಳ ಸಂಯುಕ್ತ ಕಾರ್ಯಕ್ರಮ “ಶಿವಪಾಡಿ ವೈಭವ”ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್ ಬಲ್ಲಾಳ್ ಅಧ್ಯಕ್ಷತೆ ವಹಿಸಿ, ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಶೇ.40ರಷ್ಟು ಮಂದಿ ಕೃಷಿಯನ್ನು ಆಧರಿಸಿದ್ದಾರೆ. ಯುವಕರಲ್ಲಿ ಕೃಷಿ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಕೃಷಿ ಮೇಳ ಆಯೋಜಿಸಲಾಗಿದ್ದು, ಯುವಜನರು ಇದರ ಪ್ರಯೋಜನ ಪಡೆಯಬೇಕು ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿದ್ವಾನ್ ರಾಮಚಂದ್ರ ಕುಂಜಿತ್ತಾಯ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಉದ್ಯಮಿ ಉದಯ್ ಕುಮಾರ್ ಶೆಟ್ಟಿ ಮುನಿಯಾಲ್, ದೇವಸ್ಥಾನದ ಶಾಶ್ವತ ಟ್ರಸ್ಟಿ ದಿನೇಶ್ ಸಾಮಂತ್, ಟ್ರಸ್ಟಿಗಳಾದ ಸತೀಶ್ ಪಾಟೀಲ್, ಶುಭಕರ್ ಸಾಮಂತ್, ಪ್ರಕಾಶ್ ಪ್ರಭು, ಅಶೋಕ್ ಸಾಮಂತ್, ಸಾಂಸತಿಕ ಕಾರ್ಯದರ್ಶಿ ನಾಗರಾಜ್ ಕಾಮತ್, ಶಿವಪಾಡಿ ವೈಭವ ಆಚರಣಾ ಸಮಿತಿಯ ಪ್ರ.ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ದೇವಳದ ಅಭಿವೃದ್ಧಿ ಟ್ರಸ್ಟ್ನ ಕಾರ್ಯದರ್ಶಿ ಗೋಪಾಲಕೃಷ್ಣ್ಣ ಪ್ರಭು ಉಪಸ್ಥಿತರಿದ್ದರು.
ಶಿವಪಾಡಿ ವೈಭವ ಆಚರಣಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ.ರಘುಪತಿ ಭಟ್ ಪ್ರಸ್ತಾವಿಕವಾಗಿ ಮಾತನಾಡಿದರು. ದೇವಳದ ಆಡಳಿತ ಮೊಕ್ತೇಸರ ಮಹೇಶ್ ಠಾಕೂರ್ ಸ್ವಾಗತಿಸಿದರು. ಪತ್ರಕರ್ತ ರಾಜೇಶ್ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು.
.
ಸಾಧಕರಿಗೆ ಸನ್ಮಾನ :
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 9 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಪಾಕಶಾಸ್ತ್ರ ವಿಭಾಗದಲ್ಲಿ ಸುದರ್ಶನ ಭಟ್ ಬೆದ್ರಾಡಿ, ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಮಂಜುನಾಥ ಕಾಮತ್, ಸಂಗೀತ ವಿಭಾಗದಲ್ಲಿ ಉಷಾ ಹೆಬ್ಬಾರ್, ವೈದ್ಯಕಿಯ ವಿಭಾಗದಲ್ಲಿ ಡಾ. ಶಶಿಕಿರಣ್ ಉಮಾಕಾಂತ್, ಯಕ್ಷಗಾನ ಕ್ಷೇತ್ರದಲ್ಲಿ ಡಾ. ಎಂ.ಎಲ್ ಸಾಮಗ, ಉದ್ಯಮಿಗಳಾದ ಮುಕುಂದ ಪ್ರಭು, ರುರಾಮ ರೆಡ್ಡಿ, ಕೃಷಿ ಕ್ಷೇತ್ರದಲ್ಲಿ ರಿಕೇಶ್ ಪಾಲನ್ ಮತ್ತು ಡಾ, ಶಂಕರ್ ಅವರನ್ನು ಗೌರವಿಸಲಾಯಿತು.













