ಉಡುಪಿ: ಸಹಕಾರ ಸಂಸ್ಥೆಗಳು ಜನರ ವಿಶ್ವಾಸ, ನಂಬಿಕೆಯೊಂದಿಗೆ ಕಾರ್ಯ ದಕ್ಷತೆಯಿಂದ ಮುನ್ನಡೆದರೆ ಯಶಸ್ಸು ಗಳಿಸಬಹುದು ಎಂದು ಮಹಾಮಂಡಳದ ನಿರ್ದೇಶಕ ಬಿ.ಸಿ. ಲೋಕಪ್ಪ ಗೌಡ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಶನಿವಾರ ಕಡಿಯಾಳಿ ಹೋಟೆಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ ಬಳಕೆ ಪರಿಣಾಮ ಸೈಬರ್ ಕ್ರೈಮ್ ಗಳು ಹೆಚ್ಚಾಗಿ, ಕೆಲವು ಸಹಕಾರಿ ಸಂಸ್ಥೆಗಳು ಚಿಂತಾಜನಕ ಸ್ಥಿತಿಗೆ ತಲುಪಿದೆ. ಆ ಬಗ್ಗೆ ಸಂಸ್ಥೆಗಳು ಸಾಕಷ್ಟು ಅರಿವು ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಹಾಗೂ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು, ಮೈಕ್ರೋ ಫೈನಾನ್ಸ್ ಗಳಿಗೆ ಸಂಬಂಧಿಸಿದ ರಾಜ್ಯ ಸರಕಾರದ ಸುಗ್ರಿವಾಜ್ಞೆ ಸಹಕಾರ ಸಂಸ್ಥೆಗಳಿಗೆ ಅನ್ವಯ ಆಗುವುದಿಲ್ಲ. ಆದರೂ ಸಹಕಾರ ಸಂಸ್ಥೆಗಳು ಸಾಲಗಾರರ ಮನೆಗೆ ಹೋಗಿ ಕಿರುಕುಳ ಹಾಗೂ ತೊಂದರೆ ಕೊಡುವ ಕಾರ್ಯ ಮಾಡಬಾರದು. ಸಾಲ ವಸೂಲು ಮಾಡಲು ನಮಗೆ ಕಾನೂನಿನಲ್ಲಿ ಸಾಕಷ್ಟು ಅವಕಾಶ ಇದೆ. ಅದರ ಪ್ರಕಾರವೇ ಸಾಲ ವಸೂಲು ಮಾಡಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿ,
ಮಹಾಮಂಡಳದ ನಾಮನಿರ್ದೇಶಿತ ನಿರ್ದೇಶಕ ಎನ್.ಗಂಗಣ್ಣ ಮಾತನಾಡಿದರು. ಮಹಾಮಂಡಳದ ನಿರ್ದೇಶಕರಾದ ರಾಮರೆಡ್ಡಿ, ಶಿವಪ್ರಸಾದ್, ವೃತ್ತಿಪರ ನಿರ್ದೇಶಕಿ ಕೆ.ಸಿ.ನಾಗರತ್ನ, ಸಹಕಾರ ಇಲಾಖೆಯ ಜಂಟಿ ಉಪ ನಿಬಂಧಕ ಪ್ರವೀಣ್ ನಾಯ್ಕಿ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಕೆ.ಆರ್.ಲಾವಣ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಹಕಾರ ಇಲಾಖೆಯ ರಾಜ್ಯಮಟ್ಟದ ಚರ್ಚಾಸ್ಪರ್ಧೆ ಯಲ್ಲಿ ದ್ವಿತೀಯ ಸ್ಥಾನ ಪಡೆದ ಎಂಜಿಎಂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಹಾಮಂಡಳದ ಹಿರಿಯ ಸಿಬ್ಬಂದಿ ಪೂರ್ಣಿಮಾ, ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ಆಡಳಿತ ಮಂಡಳಿ ಸದಸ್ಯರಾದ ಗಂಗಾಧರ ಶೆಟ್ಟಿ, ಸುಧೀರ್ ವೈ., ಬಿ.ಪ್ರದೀಪ ಯಡಿಯಾಳ, ಬಿ. ಕರುಣಾಕರ ಶೆಟ್ಟಿ, ಹರೀಶ್ ಕಿಣಿ, ಬಿ.ಅರುಣ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು. ಯೂನಿಯನ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿದರು.
ಆಡಳಿತ ಮಂಡಳಿ ಸದಸ್ಯ ಶ್ರೀಧರ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಹಕಾರ ಸಂಘಗಳ ಕುಂದಾಪುರ ವಿಭಾಗದ ಸಹಾಯಕ ನಿಬಂಧಕಿ ಸುಕನ್ಯಾ ‘ಸಹಕಾರ ಕಾಯಿದೆಯ ಇತ್ತೀಚಿನ ತಿದ್ದುಪಡಿಗಳು’, ಪೊಲೀಸ್ ಉಪನಿರೀಕ್ಷಕಿ ಮುಕ್ತಾ ಬಾಯಿ ‘ಸೈಬರ್ ಅಪರಾಧಗಳು ಮತ್ತು ಭದ್ರತಾ ಕ್ರಮಗಳು’ ಹಾಗೂ ಸನ್ನದು ಲೆಕ್ಕಪರಿಶೋಧಕ ವರುಣ್ ಭಟ್ ‘ಸಹಕಾರ ಸಂಸ್ಥೆಗಳಲ್ಲಿ ಆರ್ಥಿಕ ಶಿಸ್ತು’ ಕುರಿತು ಉಪನ್ಯಾಸ ನೀಡಿದರು.












