ಉಡುಪಿ: ಉಡುಪಿಯ ಕರಂಬಳ್ಳಿಯ ನಿವಾಸಿ ಮೊಹಮ್ಮದ್ ಅಕ್ರಮ್ ಇತ್ತೀಚೆಗೆ ಜಿನಾ ಎಂಬ ಯುವತಿಯನ್ನು ಅಪಹರಿಸಿದ್ದು, ಬೆದರಿಕೆಯೊಡ್ಡಿ ಬಲವಂತವಾಗಿ ಮದುವೆಯಾಗಲು ಯತ್ನಿಸಿದ್ದಾನೆ. ಇದೊಂದು ವ್ಯವಸ್ಥಿತ ಲವ್ ಜಿಹಾದ್ ಷಡ್ಯಂತ್ರವಾಗಿದೆ. ಅಕ್ರಮ್‌ಗೆ ಪಿಎಫ್ಐ ನಂಟಿದ್ದು, ಈ ಕುರಿತು ಕೇಂದ್ರ ಸರಕಾರ ಎನ್ಐಎ ತನಿಖೆ ನಡೆಸಬೇಕೆಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಗೋರಕ್ಷ ಪ್ರಮುಖ್ ಸುನೀಲ್ ಕೆ.ಆರ್ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವತಿಯು 9ನೇ ತರಗತಿಯಲ್ಲಿ ಇದ್ದಾಗಲೇ ಅಕ್ರಮ್ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯ ಮಾಡಿಕೊಂಡು ಆಕೆಯನ್ನು ಲವ್ ಜಿಹಾದ್ ಬಲೆಗೆ ಬೀಳಿಸಿಕೊಂಡು, ಆಶ್ಲೀಲ ಪೋಟೊಗಳನ್ನು ಚಿತ್ರಿಸಿ ಬೆದರಿಸಿದ್ದನು. ಆಗ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ನಿರಂತರವಾಗಿ ಆಕೆಯನ್ನು ಹಿಂಬಾಲಿಸಿ, ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಅವರು ಆರೋಪಿಸಿದರು.

ಅಕ್ರಮ್ ಎಂಬಾತನು ಡ್ರಗ್ಸ್ ಜಾಲದಲ್ಲಿ ಸಕ್ರಿಯವಾಗಿರುವ ಗರುಡ ಗ್ಯಾಂಗಿನ ಸದಸ್ಯ ಎಂದು ಸಂತ್ರಸ್ತೆಯ ಪೋಷಕರು ತಿಳಿಸಿದ್ದಾರೆ. ಪೋಲಿಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪೋಷಕರ ಮಡಿಲಿಗೆ ಮಗಳನ್ನು ಸೇರಿಸಿ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಅಕ್ರಮ್‌ನನ್ನು ಕೂಡಲೇ ಬಂಧಿಸಿ, ಆತನ ಹಿಂದಿರುವ ಜಾಲವನ್ನು ತನಿಖೆ ನಡೆಸಬೇಕು. ರಾಜ್ಯ ಗೃಹ ಸಚಿವರು ಹಾಗು ಕೇಂದ್ರ ಗೃಹ ಸಚಿವರಿಗೆ ಮನವಿಯನ್ನು ನೀಡಿ ಎನ್‌ಐಎಗೆ ಪ್ರಕರಣವನ್ನು ನೀಡುವಂತೆ ತಿಳಿಸಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ವಿಭಾಗ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ, ಜಿಲ್ಲಾ ಸಂಯೋಜಕ್ ಮನೋಜ್ ಮಲ್ಪೆ ಉಪಸ್ಥಿತರಿದ್ದರು.












