ಉಡುಪಿ: ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಹಿಂದೂ ವಿರೋಧಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಉಡುಪಿ ನಗರ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ರಾಜ್ಯ ಸರಕಾರ ಹಿಂದೂ ಸಮಾಜದ ಮೇಲೆ ದಾಳಿ ಮಾಡಬೇಕೆಂಬ ಉದ್ದೇಶದಿಂದಲೇ ಸಿಇಟಿ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಲಾಗಿದೆ. ಸರಕಾರ ಈ ದಬ್ಬಾಳಿಕೆಯನ್ನು ನಿಲ್ಲಿಸದಿದ್ದರೇ, ತಕ್ಕ ಉತ್ತರ ನೀಡಲು ಉಡುಪಿಯ ಜನತೆ ಸಿದ್ದರಿದ್ದಾರೆ ಎಂದು ಕಿಡಿಕಾರಿದರು.

ವಿದ್ವಾಂಸ ಹರಿಪ್ರಸಾದ್ ಭಟ್ ಹೆರ್ಗಾ ಮಾತನಾಡಿ, ಇದು ಜನಿವಾರ ಕತ್ತರಿಸಿದಲ್ಲ, ಭದ್ರವಾದ ಹಿಂದು ಸಮಾಜದ ಬೇರನ್ನು ಕತ್ತರಿಸುವ ಪ್ರಯತ್ನವಾಗಿದೆ. ಕಳೆದ 70 ವರ್ಷಗಳಿಂದ ಹಿಂದು ಸಮಾಜವನ್ನು ಬೇರೆ ಬೇರೆ ರೀತಿಯಲ್ಲಿ ಒಡೆದಾಳುವ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ಇಷ್ಟು ನಿಷ್ಕೃಷ್ಟ ಮಟ್ಟದಲ್ಲಿ ಯಾರು ಇಳಿದಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚೆಂಪಿ ರಾಮಚಂದ್ರ ಭಟ್, ಡಾ.ಶಿವಾನಂದ್ ನಾಯಕ್, ಬಾಲಾಜಿ ರಾಘವೇಂದ್ರ ಆಚಾರ್ಯ, ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಬಿಜೆಪಿ ನಗರ ಅಧ್ಯಕ್ಷ ದಿನೇಶ್ ಆಮೀನ್, ಪ್ರಮುಖರಾದ ವೀಣಾ ಶೆಟ್ಟಿ ಉಪಸ್ಥಿತರಿದ್ದರು.












