ವಾಷಿಂಗ್ಟನ್:ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

ವಾಷಿಂಗ್ಟನ್:‌ ಕೈಗಾರಿಕೋದ್ಯಮಿ ಗೌತಮ್‌ ಅದಾನಿ ಮತ್ತು ಇತರರ ವಿರುದ್ಧದ 265 ಮಿಲಿಯನ್‌ ಡಾಲರ್‌ ಲಂಚದ ಆರೋಪಕ್ಕೆ ಸಂಬಂಧಿಸಿದ (ಕ್ರಿಮಿನಲ್‌ ಹಾಗೂ ಸಿವಿಲ್‌) ಪ್ರಕರಣಗಳನ್ನು ಜಂಟಿಯಾಗಿ ವಿಚಾರಣೆ ನಡೆಸುವಂತೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ ನೀಡಿರುವ ಮಹತ್ವದ ಬೆಳವಣಿಗೆ ನಡೆದಿರುವುದಾಗಿ ವರದಿ ತಿಳಿಸಿದೆ.

ಪ್ರಕರಣದಲ್ಲಿ ಎದುರಿಸುತ್ತಿರುವ ಆರೋಪಗಳು ಮತ್ತು ಖಾತೆಯ ವಹಿವಾಟು ಒಂದೇ ತೆರನಾಗಿದೆ ಎಂಬುದು ಕಂಡು ಬಂದಿದ್ದರಿಂದ ಕೋರ್ಟ್‌ ಈ ಆದೇಶ ನೀಡಿರುವುದಾಗಿ ವರದಿ ವಿವರಿಸಿದೆ.

ನ್ಯಾಯಾಲಯದ ದಕ್ಷತೆ ಉತ್ತೇಜಿಸಲು ಹಾಗೂ ವಿಚಾರಣೆ ದಿನ ನಿಗದಿಪಡಿಸುವ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಮೂರು ಪ್ರಕರಣಗಳನ್ನು ಜಂಟಿಯಾಗಿ ವಿಚಾರಣೆ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೋರ್ಟ್‌ ವಿವರಿಸಿದೆ.
ಅದಾನಿ ವಿರುದ್ಧದ ಈ ಎಲ್ಲಾ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಧೀಶ ನಿಕೋಲಸ್‌ ಜಿ ಗರೌಫಿಸ್‌ ವಿಚಾರಣೆ ನಡೆಸಲು ನಿಯೋಜಿಸಲಾಗಿದ್ದು, ಅವರು ಅದಾನಿ ವಿರುದ್ಧದ ಕ್ರಿಮಿ*ನಲ್‌ ಪ್ರಕರಣಗಳ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.

ಸೋಲಾರ್‌ ಎನರ್ಜಿ ಗುತ್ತಿಗೆ ಪಡೆಯಲು ಬರೋಬ್ಬರಿ 2,029 ಕೋಟಿ ರೂಪಾಯಿ (265 ಮಿಲಿಯನ್‌ ಅಮೆರಿಕನ್‌ ಡಾಲರ್)‌ ಲಂಚ ನೀಡಿರುವ ಆರೋಪ ಅದಾನಿ ಹಾಗೂ ಇತರರ ವಿರುದ್ಧ ಮಾಡಲಾಗಿತ್ತು.