ವಾಲ್ಮೀಕಿ- ಮುಡಾ ಹಗರಣ ಖಂಡಿಸಿ ಆ. 3ರಿಂದ ಪಾದಯಾತ್ರೆೆ; ಜಿಲ್ಲೆಯಿಂದ 500 ಮಂದಿ ಭಾಗಿ

ಉಡುಪಿ: ವಾಲ್ಮೀಕಿ ಹಾಗೂ ಮುಡಾ ಹಗರಣ ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ಆ. 3ರಿಂದ 7 ದಿನಗಳ ಪಾದಯಾತ್ರೆೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಿಂದ ಮೈಸೂರಿನವರೆಗೆ ನಡೆಯುವ ಪಾದಯಾತ್ರೆಯಲ್ಲಿ ಜಿಲ್ಲೆಯ 500 ಮಂದಿ ಭಾಗವಹಿಸಲಿದ್ದಾರೆ ಎಂದು ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ ವಿಠಲ ಪೂಜಾರಿ ತಿಳಿಸಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡೂ ಹಗರಣಗಳಲ್ಲಿ ಸರಕಾರದ ಕೈವಾಡವಿದೆ. ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ, ಹಿಂದುಳಿದ ವರ್ಗಗಳ ಹಣವನ್ನು ಸರಕಾರ ಲೂಟಿ ಮಾಡುತ್ತಿದೆ. ಸುಮಾರು 25 ಸಾವಿರ ಕೋ.ರೂ.ಗಳನ್ನು ಸರಕಾರದ ವಿವಿಧ ಉಚಿತ ಭಾಗ್ಯಗಳಿಗೆ ಉಪಯೋಗಿಸುತ್ತಿದೆ. ಶಾಲಾ ಮಕ್ಕಳ ಬಸ್ ಭಾಗ್ಯ, ಹಾಲಿನ ದರ, ಮದ್ಯದ ದರ, ಇಂಧನ ಹೀಗೆ ವಿವಿಧ ಯೋಜನೆಯ ನೆಪದಲ್ಲಿ ಸರಕಾರವು ಎಲ್ಲದರ ದರವನ್ನು ಹೆಚ್ಚು ಮಾಡುತ್ತಿದೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಮೋರ್ಚಾದ ಜಿಲ್ಲಾಧ್ಯಕ್ಷ ವಿಜಯ ಕೊಡವೂರು, ಜಿಲ್ಲಾಾ ಉಪಾಧ್ಯಕ್ಷ ಭಾರತಿ ಚಂದ್ರಶೇಖರ್, ಜಿಲ್ಲಾಾ ಓಬಿಸಿ ಮೋರ್ಚಾದ ಕೋಶಾಧಿಕಾರಿ ರಾಜೇಂದ್ರ ಪಂದುಬೆಟ್ಟು, ಓಬಿಸಿ ಮೋರ್ಚಾದ ನಗರ ಅಧ್ಯಕ್ಷ ಮಲ್ಪೆ ಲಕ್ಷ್ಮೀಶ ಇದ್ದರು.