ಉಡುಪಿ: ವಕೀಲರು ಮತ್ತು ನ್ಯಾಯಾಧೀಶರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಕೀಲರು ಉತ್ತಮವಾಗಿ ವಾದ ಮಂಡಿಸಿದರೆ, ನ್ಯಾಯಾಧೀಶರು ಒಳ್ಳೆಯ ತೀರ್ಪು ನೀಡಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಹೇಳಿದ್ದಾರೆ.
ಉಡುಪಿ ನ್ಯಾಯಾಲಯ ಸಂಕೀರ್ಣಕ್ಕೆ ಸ್ಥಳಾಂತರಗೊಂಡ ಉಡುಪಿ ವಕೀಲರ ಸಂಘದ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಕೀಲರ ವೃತ್ತಿಯಲ್ಲಿರುವಷ್ಟು ಸ್ವಾತಂತ್ರ್ಯ ಬೇರೆ ಯಾವುದೇ ವೃತ್ತಿಯಲ್ಲಿ ಇಲ್ಲ. ವಕೀಲರ ಬದುಕೇ ತುಂಬಾ ಬಹಳಷ್ಟು ಕಠಿಣವಾಗಿರುತ್ತದೆ. ತಮ್ಮ ಕುಂಟಬಕ್ಕಿಂತ ಬೇರೆ ಕುಟುಂಬಕ್ಕೆ ನ್ಯಾಯದಾನ ಮಾಡುವ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ ಎಂದರು.
ವಕೀಲರ ಸಂಘ ಪ್ರಮುಖವಾಗಿ ತಮ್ಮ ಕಚೇರಿಯಲ್ಲಿ ಗ್ರಂಥಾಲಯ ಹಾಗೂ ತಂತ್ರಜ್ಞಾನಗಳ ಅಳವಡಿಸಿಕೊಳ್ಳಬೇಕು. ಅದಕ್ಕೆ ಕಟ್ಟಡ ಮುಖ್ಯವಾಗುತ್ತದೆ. ಕಕ್ಷಿದಾರನಿಗೆ ನ್ಯಾಯದಾನ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಆ ಕರ್ತವ್ಯ ಸರಿಯಾಗಿ ಮಾಡಲು ನಮಗೆ ತಂತ್ರಜ್ಞಾನದ ವ್ಯವಸ್ಥೆ, ಉತ್ತಮ ಕಟ್ಟಡ ಹಾಗೂ ಮೂಲಭೂತ ಸೌಲಭ್ಯಗಳು ಇರಬೇಕು. ಇದೆಲ್ಲ ಸೌಲಭ್ಯಗಳನ್ನು ಮುಂದೆ ವಕೀಲರ ಸಂಘ ಮಾಡಿಕೊಡಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸುನೀಲ್ ಟಿ.ಮಸರಡ್ಡಿ ಮಾತನಾಡಿದರು.
ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್. ವಂದಿಸಿದರು. ನ್ಯಾಯವಾದಿ ಸಹನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.












