ಲೋಕಸೇವಾ ಆಯೋಗದ ಪರೀಕ್ಷೆಯನ್ನು ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾಗಿ ನಡೆಸಿ :ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ: ಕರ್ನಾಟಕ ಲೋಕಸೇವಾ ಆಯೋಗದ
ವತಿಯಿಂದ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ಆಗಸ್ಟ್ 27 ರಂದು ನಡೆಯುವ ಪೂರ್ವಭಾವಿ ಪರೀಕ್ಷೆಯಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾಗಿ
ಪರೀಕ್ಷೆಯನ್ನು ನಡೆಸಲು ಮುಂದಾಗಬೇಕು ಎಂದು
ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.

ಅವರು ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ನಡೆಯುವ ಪೂರ್ವಭಾವಿ ಪರೀಕ್ಷೆಯ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

2023 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ 384 ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಗಳು ಆಗಸ್ಟ್ 27 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ರ ವರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯವರೆಗೆ ಪತ್ರಿಕೆ-2 ರ ಪರೀಕ್ಷೆಗಳು ಎರಡು ಪಾಳಿಯಲ್ಲಿ ನಡೆಯಲಿದ್ದು,
ನಿಷ್ಪಕ್ಷಪಾತವಾಗಿ ಪರೀಕ್ಷೆಯನ್ನು ನಡೆಸಲು ಜಿಲ್ಲೆಯ ಮುಖ್ಯ ಮೇಲ್ವಿಚಾರಕರು ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆದ್ಯತೆ ನೀಡಬೇಕು.

ಆಯೋಗವು ನೀಡಿರುವ ಮಾರ್ಗಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ರೀತಿಯ ಗೊಂದಲ ಅನುಮಾನಕ್ಕೆ ಅನುವು ಮಾಡಿಕೊಡದೇ ಸುಲಲಿತವಾಗಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದರು.

ಅಭ್ಯರ್ಥಿಗಳು ಪರೀಕ್ಷಾ ದಿನಗಳಂದು ಬೆಳಗ್ಗಿನ ಹಾಗೂ
ಮಧ್ಯಾಹ್ನದ ಅಧಿವೇಶನಗಳ ಪರೀಕ್ಷಾ ಆರಂಭವಾಗುವ ಎರಡು ಗಂಟೆಗಳ ಮೊದಲೇ ಕಡ್ಡಾಯವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಪರೀಕ್ಷಾ ಕೇಂದ್ರಕ್ಕೆ ಮೊಬೈಲ್, ಸ್ಮಾರ್ಟ್ವಾಚ್ ಸೇರಿದಂತೆ
ಇತ್ಯಾದಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಂಡೊಯ್ಯಲು ನಿಷೇಧವಿದೆ ಎಂದರು.

ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ತಪಾಸಣಾ ಸಿಬ್ಬಂದಿಗಳು ಮೊದಲ ಹಂತದಲ್ಲಿ ಮುಖ್ಯಗೇಟ್ ಬಳಿಯೇ ನಿಲ್ಲಿಸಿ ತಪಾಸಣೆ ಮಾಡಿದ ನಂತರವೇ
ಒಳಗೆ ಬಿಡಬೇಕು. ಎರಡನೇ ಹಂತದಲ್ಲಿ ಪರೀಕ್ಷಾ ತಪಾಸಣೆ ನಡೆಸಿದ ಎಲ್ಲಾ ಅಭ್ಯರ್ಥಿಗಳ ಗುರುತಿನ ಚೀಟಿ, ಪ್ರವೇಶ ಪತ್ರವನ್ನು ಕಡ್ಡಾಯವಾಗಿ ಪರಿಶೀಲಿಸಿ, ಅವರುಗಳ ಅಭ್ಯರ್ಥಿತ್ವದ ಬಗ್ಗೆ ಖಚಿತಪಡಿಸಿಕೊಂಡ ನಂತರವೇ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸಲು ಅನುಮತಿಸತಕ್ಕದ್ದು ಎಂದರು.

ಅಭ್ಯರ್ಥಿಗಳು ಶೂ, ಸಾಕ್ಸ್ ಅನ್ನು ಧರಿಸಲು ಅವಕಾಶವಿರುವುದಿಲ್ಲ. ಸಾಧಾರಣ ಚಪ್ಪಲಿಗಳನ್ನು ಧರಿಸಬಹುದಾಗಿದೆ. ಮಂಗಳ ಸೂತ್ರ
ಮತ್ತು ಕಾಲುಂಗುರಗಳನ್ನು ಹೊರತುಪಡಿಸಿ ಯಾವುದೇ ಆಭರಣಗಳನ್ನು, ತುಂಬು ತೋಳಿನ ಶರ್ಟ್, ಸ್ವೆಟರ್‌ಗಳನ್ನು ಹಾಗೂ ಫೇಸ್‌ಮಾಸ್ಕ್ ಧರಿಸಿ ಬಂದಲ್ಲಿ ಪರೀಕ್ಷೆಗೆ ಹಾಜರಾಗಲು ಅವಕಾಶವಿಲ್ಲ
ಎಂದ ಅವರು, ಪರೀಕ್ಷೆ ಬರೆಯಲಿರುವ ಅಂಗವಿಕಲ ಅಭ್ಯರ್ಥಿಗಳು ಅಂಗವೈಕಲ್ಯತೆ ಹೊಂದಿರುವ ಕುರಿತು ವೈದ್ಯಕೀಯ ಪ್ರಮಾಣ ಪತ್ರವನ್ನು ಹಾಜರುಪಡಿಸುವುದು ಕಡ್ಡಾಯವಾಗಿರುತ್ತದೆ ಎಂದರು.

ಪರೀಕ್ಷಾ ಕೊಠಡಿಗಳಲ್ಲಿನ ಸಿ.ಸಿ.ಟಿ.ವಿ ಕ್ಯಾಮೆರಾಗಳು ಹಾಗೂ ಬಾಡಿ ಕ್ಯಾಮೆರಾಗಳು ಪರೀಕ್ಷಾ ಪ್ರಕ್ರಿಯೆಯನ್ನು ಮತ್ತು ಎಲ್ಲಾ ಅಭ್ಯರ್ಥಿಗಳ ಹಾಗೂ ಸಂವೀಕ್ಷಕರ ಚಲನವಲನ, ಮುಖಚಹರೆಗಳನ್ನು ಸ್ಪಷ್ಟವಾಗಿ ಸೆರೆಹಿಡಿಯುವಂತೆ ಅಳವಡಿಸಲು
ಸೂಕ್ತ ಕ್ರಮ ವಹಿಸಬೇಕು ಎಂದ ಅವರು, ಪರೀಕ್ಷಾ
ಕೇಂದ್ರಗಳಿಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸಿ
ದುರಾಚಾರಗಳನ್ನು ತಡೆಯಲು ಪರೀಕ್ಷಾ ಉಪಕೇಂದ್ರಗಳಿಗೆ ಜಾಮರ್ ಅನ್ನು ಸಹ ಅಳವಡಿಸಬೇಕು ಎಂದರು.

ಪರೀಕ್ಷಾ ಕೊಠಡಿಗಳಲ್ಲಿ ಲೈಟ್ ಹಾಗೂ ಫ್ಯಾನ್ ವ್ಯವಸ್ಥೆ, ಕುಡಿಯುವ ನೀರು, ಗಡಿಯಾರದ ವ್ಯವಸ್ಥೆಯನ್ನು ಕಲ್ಪಿಸಬೇಕು. ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ
ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದ ಅವರು,
ಮಾರ್ಗಾಧಿಕಾರಿಗಳೂ ಪರೀಕ್ಷಾ ಪೂರ್ವ ದಿನದಂದು
ಉಪಕೇಂದ್ರಗಳಿಗೆ ಭೇಟಿ ನೀಡಿ, ಪರೀಶಿಲಿಸಿ ವರದಿ ಮಾಡಬೇಕು ಎಂದರು.

ಪರೀಕ್ಷೆಗೆ ಸಂಬಂಧಪಟ್ಟ ಗೌಪ್ಯ ಸಾಮಾಗ್ರಿಗಳನ್ನು ಜಿಲ್ಲಾ ಖಜಾನೆಯ ಸುಪರ್ದಿಯಲ್ಲಿರಿಸಿ, ಪರೀಕ್ಷಾ ದಿನದಂದು ಸೂಕ್ತ ಬಂದೋಬಸ್ತ್ ನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ರವಾನಿಸಲಾಗುವುದು.ಇವು ಜಿಲ್ಲಾ ತ್ರಿಸದಸ್ಯರ ಸಮಿತಿಯ ಉಸ್ತುವಾರಿಯಲ್ಲಿ ನಡೆಯಲಿದೆ ಎಂದರು.

ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು
ಘೋಷಿಸಲಾಗುವುದು. ಸಮೀಪದ ಜೆರಾಕ್ಸ್ ಮತ್ತು ಕಂಪ್ಯೂಟರ್ ಅಂಗಡಿಗಳನ್ನು ಮುಚ್ಚಿಸಬೇಕು. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಅನ್ನು ಸಹ ಒದಗಿಸಲಾಗುವುದು ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಮೇಲ್ವಿಚಾರಕರು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಸಮಯದ ಮುನ್ಸೂಚನೆ
ನೀಡಲು ಗಂಟೆಯನ್ನು ಸಮಯಕ್ಕೆ ಸರಿಯಾಗಿ ಬಾರಿಸಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಎಎಸ್‌ಪಿ ಟಿ.ಸಿದ್ದಲಿಂಗಪ್ಪ, ಡಿಡಿಪಿಐ ಗಣಪತಿ, ಡಿಡಿಪಿಯು ಮಾರುತಿ, ಡಾ. ಜಿ. ಶಂಕರ್
ಕಾಲೇಜಿನ ಪ್ರಾಚಾರ್ಯರ ಪ್ರೊ. ಭಾಸ್ಕರ್ ಶೆಟ್ಟಿ ಹಾಗೂ ಮತ್ತಿತರ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.