ಉಡುಪಿ: ರಾಷ್ಟ್ರಕವಿ ಗೋವಿಂದ ಪೈಗಳ ಸಂಶೋಧನೆ, ಬರಹಗಳು ಅಧ್ಯಯನಶೀಲರಿಗೆ ಪ್ರೇರಣೆ. ಅಧಿಕೃತ ಮತ್ತು ಮೂಲ ಆಕರಗಳನ್ನು ಇಟ್ಟುಕೊಂಡು ಬರೆದ ಅಪರೂಪದ ಸಾಹಿತಿ. ಸೃಜನಾತ್ಮಕ ಕ್ಷೇತ್ರಕ್ಕೂ ಗೋವಿಂದ ಪೈಗಳ ಕೊಡುಗೆ ದೊಡ್ಡದು. ಅವರು ಬರೆದ ದ್ರಾವಿಡ ಲಯದ ಹಾಡುಗಳು ಸಾಹಿತ್ಯದ ಮೈಲಿಗಲ್ಲು ಎಂದು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಹೇಳಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ನಡೆದ “ಗೋವಿಂದ ಪೈ ಸಂಶೋಧನ ಸಂಪುಟ” ಪರಿಷ್ಕೃತ ದ್ವಿತೀಯ ಮುದ್ರಣ ಭಾಗ-2ರ ಅನಾವರಣ ಸಮಾರಂಭದಲ್ಲಿ ಟಿ.ವಿ ಮೋಹನದಾಸ್ ಪೈ ಅವರು ಪ್ರವರ್ತಿಸಿರುವ ವಿಮಲಾ ವಿ. ಪೈ ಪ್ರಾಯೋಜಿತ “ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ” ಸ್ವೀಕರಿಸಿ ಮಾತನಾಡಿದರು.

ಸಂಶೋಧನೆಯ ಜೊತೆಗೆ ಕಾವ್ಯದ ಸರ್ವ ಸ್ವಾರಸ್ಯವನ್ನು ಜೀರ್ಣಿಸಿಕೊಂಡು ಬರೆದವರು ಗೋವಿಂದ ಪೈಗಳು, ಓರ್ವ ತಪಸ್ವಿಯಂತೆ, ಋಷಿಯಂತೆ ಜೀವನ ನಡೆಸಿದರು ಎಂದು ಹೇಳಿದರಲ್ಲದೆ, ತನಗೆ ಅವರ ಹೆಸರಿನ ಪ್ರಶಸ್ತಿ ನೀಡಿದ ಬಗ್ಗೆ ಹೆಮ್ಮೆ ಮತ್ತು ಸಂತೋಷ ವ್ಯಕ್ತಪಡಿಸಿದರು.
ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅವರು, ‘ಗೋವಿಂದ ಪೈ ಸಂಶೋಧನ ಸಂಪುಟ” ಪರಿಷ್ಕೃತ ದ್ವಿತೀಯ ಮುದ್ರಣ ಭಾಗ-2ರ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಬಿ ವಿವೇಕ್ ರೈ ಮಾತನಾಡಿ, ಕರಾವಳಿಯ ಜನರಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಯಬೇಕು, ನಿಷೇಧಾತ್ಮಕ ಚರ್ಚೆಗಳಿಗೆ ಬದಲಾಗಿ ಸ್ಥಿತಪ್ರಜ್ಞ ಮನೋಭಾವ ಬೆಳೆಸಿಕೊಳ್ಳಬೇಕು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಪಂಡಿತ ಪರಂಪರೆಯ ಇತಿಹಾಸವಿದೆ. ಅದು ಮುಂದುವರಿಯಬೇಕು ಮತ್ತು ಯುವ ತಲೆಮಾರು ಗೋವಿಂದ ಪೈಗಳ ಕೃತಿಗಳಿಂದ ಪ್ರಚೋದನೆ ಪಡೆದು ಸಂಶೋಧನೆ ಮುಂದುವರಿಸಬೇಕು ಎಂದರು.
ಇಂತಹ ಕೆಲಸಗಳಿಂದ ಕರಾವಳಿಗೆ ಒಳ್ಳೆಯ ಹೆಸರು ಬರುತ್ತದೆ. ಮೊಬೈಲ್ ನಲ್ಲಿ ಅನಗತ್ಯ ವಿಚಾರಗಳನ್ನು ಹಂಚುವ ಬದಲು, ಅಧ್ಯಯನಶೀಲತೆ ಮತ್ತು ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು, ಶ್ರೀಮಂತಿಕೆಯ ಆಡಂಬರಗಳಿಗೆ ಪರ್ಯಾಯವಾಗಿ ವಿದ್ವತ್ ಜಗತ್ತು ಬೆಳೆಯಬೇಕು ಎಂದು ಆಶಿಸಿದರು. ಹಣದ ವ್ಯಾಮೋಹ ತ್ಯಜಿಸಿದರೆ ಮಾತ್ರ ವಿದ್ವತ್ತಿನ ಕೆಲಸ ಸಾಧ್ಯ ಎಂದು ಹೇಳಿದರು.ಮುಂಬೈ ವಿವಿಯ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ್ ಕುಮಾರ್ ಅಭಿನಂದನಾ ಭಾಷಣ ಮಾಡಿದರು.
ವೇದಿಕೆಯಲ್ಲಿ ಮಾಹೆ ಕುಲಪತಿ ಡಾ.ಎಂ.ಡಿ. ವೆಂಕಟೇಶ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂಜಿಎಂ ಕಾಲೇಜಿನ ಡಾ. ಲಕ್ಷ್ಮೀನಾರಾಯಣ ಕಾರಂತ, ಕೃತಿಯ ಸಂಪಾದಕರುಗಳಾದ ಪ್ರೊ. ಮುರಳೀಧರ ಉಪಾಧ್ಯ ಹಾಗೂ ಡಾ.ಪಾದೇಕಲ್ಲು ವಿಷ್ಣು ಭಟ್ಟ ಉಪಸ್ಥಿತರಿದ್ದರು.
ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಆರ್‌ಆರ್‌ಸಿಯ ಸಹಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್ ಕಾರ್ಯಕ್ರಮ ನಿರೂಪಿಸಿದರು.












