ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಫೋಟಕ ಬ್ಯಾಟರ್ ರಜತ್ ಪಾಟಿದಾರ್’ಗೆ ನಾಯಕನ ಪಟ್ಟ- ಅಧಿಕೃತ ಘೋಷಣೆ.

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಟೂರ್ನಿ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಉತ್ಸಾಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ನಡುವೆ ಐಪಿಎಲ್ 2025ರ ಟೂರ್ನಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ 8ನೇ ಹೊಸ ನಾಯಕನ ಅಧಿಕೃತ ಘೋಷಣೆ ಆಗಿದೆ.

ಫಾಫ್ ಡು ಪ್ಲೆಸಿಸ್ ಬಿಡುಗಡೆಯಾದ ನಂತರ ಆರ್‌ಸಿಬಿ ಹೊಸ ನಾಯಕನ ಹುಡುಕಾಟದಲ್ಲಿತ್ತು. ಇದೀಗ ಆರ್‌ಸಿಬಿ ತಂಡಕ್ಕೆ ರಜತ್ ಪಾಟಿದಾರ್ ಹೊಸ ನಾಯಕನ್ನಾಗಿ ನೇಮಕಗೊಂಡಿದ್ದಾರೆ.

ರಜತ್ ಪಾಟಿದಾರ್ ಕಳೆದೆರಡು ವರ್ಷಗಳಿಂದ ಆರ್‌ಸಿಬಿ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ತಂಡ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ನೆರವಾಗಿದ್ದಾರೆ. ಪಾಟಿದಾರ್ ನಾಯಕನ್ನಾಗುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ.

ಮಾಜಿ ನಾಯಕ ವಿರಾಟ್ ಕೊಹ್ಲಿ ಬೆಂಬಲದೊಂದಿಗೆ ಪಾಟಿದಾರ್ ಹೇಗೆ ನಾಯಕತ್ವ ನಿರ್ವಹಿಸಲಿದ್ದಾರೆ ಎಂಬುದು ಆರ್‌ಸಿಬಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. 31 ವರ್ಷದ ರಜತ್ ಪಟಿದಾರ್ 2021 ರಿಂದ ಆರ್‌ಸಿಬಿ ತಂಡದಲ್ಲಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ, ಪಾಟಿದಾರ್ ಅವರನ್ನು ಆರ್‌ಸಿಬಿ ತಂಡವು 11 ಕೋಟಿ ರೂ. ನೀಡುವ ಮೂಲಕ ಬೃಹತ್ ಮೊತ್ತಕ್ಕೆ ಉಳಿಸಿಕೊಂಡಿತು.