ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಲು ಬಿಜೆಪಿ ನಾಯಕರಿಗೆ ನೈತಿಕ ಹಕ್ಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನ ಸಾಮಾನ್ಯರ ಪಾಲಿಗೆ ಹೊರೆಯಾಗುತ್ತಿದೆ. ಕೇಂದ್ರದ ವಿರುದ್ಧ ಮಾತನಾಡಲು ಆಗದ ರಾಜ್ಯ ಬಿಜೆಪಿ ನಾಯಕರು, ಜನಪರವಾಗಿರುವ ನಮ್ಮ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದರು.

ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಸೋಮವಾರ ನಡೆದ ಕೇಂದ್ರ ಸರ್ಕಾರದ ವಿರುದ್ಧದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಕರ್ನಾಟಕದಲ್ಲಿ ಸ್ವತಃ ಬಲದ ಮೇಲೆ ಅಧಿಕಾರಕ್ಕೇರಲು ಸಾಧ್ಯವಾಗದ ಬಿಜೆಪಿ ನಾಯಕರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದುವರೆಗೂ 80 ಸಾವಿರ ಕೋಟಿ ಹಣ ಜನರ ಜೇಬಿಗೆ
ಮುಂದಿನ ತಿಂಗಳು 20 ನೇ ತಾರೀಖಿಗೆ ನಮ್ಮ ಸರ್ಕಾರ ಅಧಿಕಾರ ಬಂದು 2 ವರ್ಷ ಪೂರೈಸುತ್ತಿದೆ. ಈವರೆಗೆ 80 ಸಾವಿರ ಕೋಟಿ ರೂಪಾಯಿಗಳಷ್ಟು ಹಣವನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಜನರ ಜೇಬಿಗೆ ಹಾಕಿದ್ದೇವೆ. ಇದು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜನ ಸಾಮಾನ್ಯರ ಮೇಲಿರುವ ಬದ್ಧತೆ ಎಂದು ಸಚಿವರು ಹೇಳಿದರು.

2023 ರಲ್ಲಿ ಜನರ ವಿಶ್ವಾಸ ಗಳಿಸಿ ಕರ್ನಾಟದಲ್ಲಿ 136 ಸ್ಥಾನಗಳನ್ನು ಗೆದ್ದು ಅಧಿಕಾರದಲ್ಲಿದ್ದೇವೆ. ಸರ್ಕಾರ ಬಂದು 100 ದಿನಗಳ ಒಳಗೆ ಕೊಟ್ಟ ಮಾತಿನಂತೆ 5 ಗ್ಯಾರಂಟಿಗಳನ್ನು ಮನೆ ಬಾಗಿಲಿಗೆ ತಂದಿದ್ದೇವೆ. 136 ಸ್ಥಾನ ಗೆದ್ದರೂ ರಾಜ್ಯ ಸರ್ಕಾರ ಉಳಿಯುವುದಿಲ್ಲ, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಬರಲು ಸಾಧ್ಯವಿಲ್ಲ ಅಂತ ಬಿಜೆಪಿಗರು ಹೇಳುತ್ತಿದ್ದರು. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆಯುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಕರ್ನಾಟಕದ ಇತಿಹಾಸದಲ್ಲೇ ಎಂದೂ ಕಾಣದಂತಹ ಹಲವಾರು ಯೋಜನೆಗಳ ಮೂಲಕ, ಅಭಿವೃದ್ಧಿಯ ಮೂಲಕ ನಮ್ಮ ಸರಕಾರ ಇಂದು ಜನರ ಪ್ರೀತಿ, ವಿಶ್ವಾಸ ಗಳಿಸಿದೆ. ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸುಮಾರು 4-5 ಸಾವಿರ ರೂಪಾಯಿ ಲಾಭ ಮಾಡಿಕೊಡಲಾಗುತ್ತಿದೆ. ತನ್ಮೂಲಕ ಕುಟುಂಬಗಳ ಆರ್ಥಿಕ ಶಕ್ತಿಯನ್ನು, ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಪೆಟ್ರೋಲ್ ಬೆಲೆ 63.77 ರೂಪಾಯಿ ಇತ್ತು, ಇಂದು 102 ರೂಪಾಯಿ ಆಗಿದೆ. ಗ್ಯಾಸ್ ಸಿಲೆಂಡರ್ ದರ 410 ರೂಪಾಯಿ ಇತ್ತು, ಈಗ 855.50 ರೂಪಾಯಿ ಆಗಿದೆ. ಅಲ್ಲದೆ, ಸಿಮೆಂಟ್, ರಸ ಗೊಬ್ಬರದ ಬೆಲೆ ದುಬಾರಿಯಾದೆ. ಇದು ಕೇಂದ್ರ ಸರ್ಕಾರದ ಜನರಿಗೆ ಕೊಟ್ಟಿರುವ ಉಡುಗೊರೆ ಎಂದು ಕಿಡಿಕಾರಿದರು.

ಬಿಜೆಪಿ ವಿರುದ್ಧ ಟೀಕಾಪ್ರಹಾರ
ಬಿಜೆಪಿ ನಾಯಕರು ತಮ್ಮಲ್ಲಿ ನಡೆಯುತ್ತಿರುವ ಒಳಬೇಗುದಿ, ಕುರ್ಚಿ ಕಾದಾಟವನ್ನು ನೋಡಿ ಜನರೇ ಬೈಯುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ದಿಕ್ಕನ್ನು ತಪ್ಪಿಸುವ ಸಲುವಾಗಿ ಜನಾಕ್ರೋಶ ಅಂತ ಮಾಡಿದರು. ಆದರೆ, ಅವರಿಗೆ ಕರ್ನಾಟಕ ಪೂರ್ತಿ ಜನಾಕ್ರೋಶ ರ‍್ಯಾಲಿ ಮಾಡಲು ಮುಖ ಇರಲಿಲ್ಲ. ಅವರು ಜನಾಕ್ರೋಶ ಮಾಡಲು ಹೋರಟಾಗಲೇ ಕೇಂದ್ರ ಸರ್ಕಾರ ಸಿಲಿಂಡೆರ್ ಗೆ 50 ರೂಪಾಯಿ ಏರಿಕೆ ಮಾಡಿತು ಎಂದರು.

ರಾಜ್ಯದಲ್ಲಿ ಎಂದೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಾಗದ ಬಿಜೆಪಿಯವರು ಈಗ ಕೆಲಸವಿಲ್ಲದೆ ಖಾಲಿ ಕುಳಿತಿದ್ದಾರೆ. ಕಾರ್ಯಕರ್ತರ ದಿಕ್ಕು ತಪ್ಪಿಸುವ ಸಲುವಾಗಿ ನಮ್ಮ ಸರ್ಕಾರದ ವಿರುದ್ಧ ಬೆಲೆ ಏರಿಕೆ ಆರೋಪ ಹೊರಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈಗ ನಿಜವಾಗಿಯೂ ಜನಾಕ್ರೋಶವಿರುವುದು ಬಿಜೆಪಿಯ ಮೇಲೆ, ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ, ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡಿ ಎಂದು ಜನರು ಇವರನ್ನು ಕಳಿಸಿದರೆ ಅವರಿಗೆ ಆಂತರಿಕ ಕಚ್ಚಾಟದಿಂದ ಹೊರಗೆ ಬರಲಾಗುತ್ತಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ಜವಾಬ್ದಾರಿಯುತ ವಿರೋಧ ಪಕ್ಷವಾಗಿ ರಚನಾತ್ಮಕ ಟೀಕೆ ಮಾಡುವ ಬದಲು ಕೇವಲ ಸುಳ್ಳನ್ನೇ ಹೇಳುತ್ತ, ಒಂದೇ ಸುಳ್ಳನ್ನು ೧೦ ಬಾರಿ ಹೇಳುವ ಮೂಲಕ ಅದೇ ಸತ್ಯ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ರಾಜ್ಯದ ಜನರು ಮೂರ್ಖರಲ್ಲ, ಇವರ ಬಂಡವಾಳ ಗೊತ್ತಾಗಿದೆ. ಹಾಗಾಗಿ ಈಗ ಬಿಜೆಪಿ ಮೇಲೆ, ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ ಕಿಡಿ ಕಾರುತ್ತಿದ್ದಾರೆ ಎಂದರು.

ಯುಪಿಎ ಸರ್ಕಾರ ಇದ್ದಾಗ ಹೋಲಿಸಿ, ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಆಗಿನ ಪೆಟ್ರೋಲ್ ಬೆಲೆ ಈಗಿನ ಪೆಟ್ರೋಲ್ ಬೆಲೆ, ಡಾಲರ್ ಎದುರು ರೂಪಾಯಿಯ ಬೆಲೆ ಕುಸಿತ, ಬಂಗಾರದ ಬೆಲೆ ಇವುಗಳನ್ನು ನೋಡಿದರೆ ದೇಶದಲ್ಲಿ ಬಿಜೆಪಿ ಸರ್ಕಾರದ ಸಾಧನೆ ಏನು ಎನ್ನುವುದು ಗೊತ್ತಾಗುತ್ತದೆ. ಕೇಂದ್ರ ಸರ್ಕಾರಕ್ಕೆ ಅದಾನಿಯಂತ ಶ್ರೀಮಂತರ ಹಿತಾಸಕ್ತಿಯೇ ಮುಖ್ಯವಾಗಿದೆ ಎಂದರು.

ಒಂದು ವಾರದಲ್ಲಿ ಗೃಹಲಕ್ಷ್ಮೀ ಹಣ ಬಿಡುಗಡೆ
ಇನ್ನೊಂದು ವಾರದಲ್ಲಿ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಮಾಡಲಾಗುವುದು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಭರವಸೆ ನೀಡಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ವ್ಯಕ್ತಿ ನಮ್ಮ ಮುಖ್ಯಮಂತ್ರಿ ಎಂದು ಸಚಿವರು ಹೇಳಿದರು.

ಪ್ರತಿಭಟನಾ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿಗಳಾದ ರಣದೀಪ್ ಸುರ್ಜೆವಾಲಾ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಎಚ್.ಸಿ.ಮಹದೇವಪ್ಪ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಆರ್.ಬಿ.ತಿಮ್ಮಾಪುರ್, ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರಿಯಾಂಕ ಜಾರಕಿಹೊಳಿ ಸೇರಿದಂತೆ ವೇದಿಕೆಯಲ್ಲಿ ರಾಜ್ಯಸಭೆಯ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಜಿಲ್ಲೆಯ ಶಾಸಕರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ಹರು.