ರಾಜ್ಯ ಸರಕಾರದ ದಿವಾಳಿತನ, ಹಗರಣಗಳನ್ನು ಮರೆಮಾಚಲು ಯತ್ನಿಸುತ್ತಿರುವ ಸೊರಕೆ ನಡೆ ಖಂಡನೀಯ; ಕಿಶೋರ್ ಕುಮಾರ್ ಕುಂದಾಪುರ

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡು ಬಾರಿ ಜನತೆಯಿಂದ ತಿರಸ್ಕರಿಸಲ್ಪಟ್ಟ ವಿನಯ್ ಕುಮಾರ್ ಸೊರಕೆ, ಗೌರವಯುತವಾಗಿ ರಾಜಕೀಯ ನಿವೃತ್ತಿ ಪಡೆಯುವ ಬದಲು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ದಿವಾಳಿತನ ಮತ್ತು ಹಗರಣಗಳನ್ನು ಮರೆಮಾಚುವ ದುರುದ್ದೇಶದಿಂದ ಕ್ಷುಲ್ಲಕ ರಾಜಕಾರಣ ನಡೆಸುತ್ತಿದ್ದಾರೆ. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ವಿರುದ್ಧ ಕೀಳುಮಟ್ಟದ ಅಪಪ್ರಚಾರ ನಡೆಸುತ್ತಿರುವ ಸೊರಕೆ ನಡೆ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿ ಪತ್ರಿಕಾ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನುದಾನದ ಕೊರತೆಯ ಸಬೂಬು ಹೇಳಿ ಅಭಿವೃದ್ಧಿ ನಿರ್ಲಕ್ಷ್ಯ ಎಂದು ಆರೋಪಿಸಿರುವ ವಿನಯ ಕುಮಾರ್ ಸೊರಕೆ, ಮೊದಲು ಕಾಂಗ್ರೆಸ್ ಪಕ್ಷದ ಶಾಸಕರಿಗೆ ರಾಜ್ಯ ಸರಕಾರ ಪ್ರಸಕ್ತ ಸಾಲಿನಲ್ಲಿ ಎಷ್ಟು ಅನುದಾನ ಬಿಡುಗಡೆಗೊಳಿಸಿದೆ ಮತ್ತು ಅವರು ಕೈಗೊಂಡಿರುವ ಮಹಾನ್ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ವಿವರ ನೀಡಲಿ. ಅಧಿಕಾರದ ಲಾಲಸೆಯಿಂದ ಘೋಷಿಸಿದ ನಕಲಿ ಗ್ಯಾರಂಟಿಗಳನ್ನು ಪೂರೈಸಲಾಗದೆ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿ ಮುಳುಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ದಿವಾಳಿತನ ಜಗಜ್ಜಾಹೀರಾಗಿದೆ ಎಂದು ವಾಗ್ದಾಳಿ ನಡೆಸಿದರು.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಇತರ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಚಿಕ್ಕಾಸನ್ನೂ ಬಿಡುಗಡೆ ಮಾಡದ ರಾಜ್ಯ ಸರಕಾರದ ಹುಳುಕನ್ನು ಮುಚ್ಚಿಟ್ಟು ಕಡಲ್ಕೊರೆತಕ್ಕೆ ಪರಿಹಾರ ಆಗಿಲ್ಲ ಎಂಬ ಆರೋಪ ಹೊರಿಸುತ್ತಿರುವ ಸೊರಕೆ, ತಮ್ಮ ಸರಕಾರ ಅಭಿವೃದ್ಧಿಗಾಗಿ ಎಷ್ಟು ಹಣ ವ್ಯಯಿಸಿದೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.

ಕಳೆದ ಒಂದೂವರೆ ವರ್ಷಗಳಿಂದ ಕಡಲ್ಕೊರೆತಕ್ಕೆ ಸೂಕ್ತ ಪರಿಹಾರ ಕಲ್ಪಿಸಲು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳನ್ನು ಕರೆಸಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರೂ, ಬಿಟ್ಟಿ ಭಾಗ್ಯ ಮತ್ತು ಹಗರಣಗಳಿಂದ ಕಂಗೆಟ್ಟಿರುವ ರಾಜ್ಯ ಸರಕಾರ ಒಂದು ನಯಾ ಪೈಸೆಯನ್ನೂ ಮಂಜೂರು ಮಾಡದೇ ಇರುವುದು ಸರಕಾರದ ದಿವಾಳಿತನಕ್ಕೆ ಹಿಡಿದ ಕೈಗನ್ನಡಿಯಂತಿದೆ ಎಂದು ಹೇಳಿದರು.