ಉಡುಪಿ: ರಾಜ್ಯ ಕಾಂಗ್ರೆಸ್ ಸರಕಾರ ದಲಿತರಿಗೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿದೆ. ಒಟ್ಟು 29 ಸಾವಿರ ಕೋಟಿ ಹಣ ದುರ್ಬಳಕೆ ಮಾಡಿದೆ. 7D ಹಣ ಕಿತ್ತು ಹಾಕಿದ್ದಾರೆ ಇದು ದಲಿತರ ಮೇಲಿನ ಅನ್ಯಾಯ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರದ ದಲಿತ ಕಾಂಗ್ರೆಸ್ ನಾಯಕರು ಬಾಯಿ ಬಿಡುತ್ತಿಲ್ಲ ಎಂದು ಸಂಸದ ರಮೇಶ್ ಜಿಗಜಿಣಗಿ ಅಸಮಾಧಾನ ಹೊರಹಾಕಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಸಿ- ಎಸ್ ಟಿ ಅನುದಾನ ದುರ್ಬಳಕೆ ಕುರಿತಂತೆ ಬಿಜೆಪಿಯ 14 ತಂಡಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿವೆ. ಈ ಸರ್ಕಾರ ದಲಿತರಿಗೆ ಕೊಡುವ ಗೌರವ ಜಗಜ್ಜಾಹಿರಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಕಾಲದಿಂದ ದಲಿತರಿಗೆ ಮೋಸ ಮಾಡುತ್ತಿದೆ. ಯಾವ ಪಕ್ಷದಿಂದಲೂ ಈ ಮಟ್ಟಿಗೆ ದಲಿತರಿಗೆ ಅನ್ಯಾಯ ಆಗಿಲ್ಲ. ಹೀಗಾಗಿ ಒಬ್ಬ ದಲಿತ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಇರಬಾರದು ಎಂದು ಗುಡುಗಿದರು.
ಪ್ರಿಯಾಂಕ ಗಾಂಧಿ ನಾಮಪತ್ರ ಸಲ್ಲಿಕೆ ದಿನವನ್ನು ನೆನಪಿಸಿಕೊಂಡ ಜಿಗಜಿಣಗಿ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆಯನ್ನು ಕಿಟಕಿಯಿಂದ ನೋಡಬೇಕಾ?. ಖರ್ಗೆ ಅವರನ್ನು ಯಾಕೆ ಕರೆದುಕೊಂಡು ಹೋಗಬೇಕಿತ್ತು ಯಾಕೆ ಅವಮಾನ ಮಾಡಬೇಕಿತ್ತು. ಆ ಮುದುಕ ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದರು ಇದು ಅಸಹ್ಯ ಅಲ್ವಾ. ಇದಾ ದಲಿತರಿಗೆ ಕೊಡುವ ಗೌರವ ಎಂದು ಕಾಂಗ್ರೆಸ್ ಕೇಂದ್ರ ನಾಯಕರನ್ನು ಕುಟುಕಿದರು.












