ರಾಜ್ಯದಲ್ಲಿ ಬಜೆಟ್ ಮಂಡನೆ: ನನ್ನ ಜೀವಮಾನದಲ್ಲೇ ಇಂತಹ ಕಳಪೆ ಬಜೆಟ್ ನೋಡಿಲ್ಲ – ಬಿ.ಎಸ್ ಯಡಿಯೂರಪ್ಪ ಕಿಡಿ

ಬೆಂಗಳೂರು: ರಾಜ್ಯದಲ್ಲಿ 2024-25ನೇ ಸಾಲಿನ ಬಜೆಟ್ ಮಂಡನೆ ಇಂದು ಸಿಎಂ ಸಿದ್ದರಾಮಯ್ಯ ಅವರು ಮಾಡಿದ್ದಾರೆ. ಈ ಕುರಿತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

‘ಸಿದ್ದರಾಮಯ್ಯನವರು ಕಳಪೆ ಬಜೆಟ್ ಮಂಡಿಸಿದ್ದಾರೆ. ನನ್ನ ಜೀವಮಾನದಲ್ಲೇ ಇಂತಹ ಕಳಪೆ ಬಜೆಟ್ ನೋಡಿಲ್ಲ. ಹದಿನಾಲ್ಕು ಬಜೆಟ್ಗಳನ್ನು ಮಂಡಿಸಿರುವ ಸಿದ್ದರಾಮಯ್ಯರಿಂದ ಇಂತಹ ಕಳಪೆ ಬಜೆಟ್ ನಿರೀಕ್ಷಿಸಿರಲಿಲ್ಲ ಎಂದು ಕಿಡಿಕಾರಿದ್ದಾರೆ. ‘ಈ ಬಾರಿ ಬಜೆಟ್ನ ಬಹುತೇಕ ಅಂಶ ಕೇಂದ್ರ ಸರ್ಕಾರವನ್ನು ದೂರಲು ಮೀಸಲಿಡಲಾಗಿದೆ. ದೆಹಲಿ ಪ್ರತಿಭಟನೆಯ ಮುಂದುವರೆದ ಭಾಗವಾಗಿರುವ ಈ ಆಯವ್ಯಯ ಮಾಡಲಾಗಿದೆ. ವಾಸ್ತವಿಕ ಅಂಕಿ ಸಂಖ್ಯೆ ನೀಡದೇ ಕಾಲ್ಪನಿಕ ಅಂಕಿ ಸಂಖ್ಯೆ ನೀಡಿದ್ದು, ಈ ಬಜೆಟ್ ರಾಜ್ಯದ ಜನರಿಗೆ ಮಾಡಿರುವ ಮೋಸದಂತಿದೆ. ಜಲಸಂಪನ್ಮೂಲ ಖಾತೆಗೆ ಯಾವುದೇ ಅನುದಾನ ನೀಡದೇ, ಡಿ.ಕೆ. ಶಿವಕುಮಾರ್ ಅವರಿಗೂ ಮೋಸ ಮಾಡಲಾಗಿದೆ. ಅವರು ಮೇಕೆ ದಾಟು ಪಾದಯಾತ್ರೆ ಮಾಡಿದ್ದೇ ಸಾಧನೆಯಾಗಿದೆ. ಅದರಂತೆ ಕೃಷ್ಣಾ ಕೊಳ್ಳ, ಮಹದಾಯಿ, ನವಿಲೆ ಯೋಜನೆಗೆ ಅನುದಾನ ನಿಗದಿಪಡಿಸಿಲ್ಲ. ಬೆಂಗಳೂರು ಅಭಿವೃದ್ಧಿಗೆ ಯಾವುದೇ ಅನುದಾನ ನಿಗದಿಯಿಲ್ಲ. ಏಳನೇ ವೇತನ ಆಯೋಗದ ಅನುಷ್ಠಾನಕ್ಕೆ ಸ್ಪಷ್ಟ ಘೋಷಣೆಯಿಲ್ಲ. ಓಪಿಎಸ್ ಪುನರ್ ಜಾರಿ ಬಗ್ಗೆ ಚಕಾರ ಎತ್ತಿಲ್ಲ. ವರುಣ ಕ್ಷೇತ್ರಕ್ಕೆ ಎರಡು ಸಾವಿರ ಕೋಟಿ ಕೊಟ್ಟು, ಬೇರೆ ಕ್ಷೇತ್ರಗಳಿಗೆ ಅನುದಾನ ನೀಡಿಲ್ಲ. 27,353 ಸಾವಿರ ಕೋಟಿ ರಾಜಸ್ವ ಕೊರತೆ ಬಜೆಟ್ ಮಂಡಿಸಿರುವುದು, ರಾಜ್ಯ ಆರ್ಥಿಕ ದಿವಾಳಿಯಾಗುತ್ತಿರುವುದರ ಸ್ಪಷ್ಟ ಸೂಚನೆಯಾಗಿದೆ.

ಕಾಂಗ್ರೆಸ್ ಆಡಳಿತದಿಂದ ರಾಜ್ಯ ದಿವಾಳಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಣಕಾಸು ಪರಿಸ್ಥಿತಿಯನ್ನು ದಿವಾಳಿಯಂಚಿಗೆ ತಂದು ನಿಲ್ಲಿಸುವ ಅತ್ಯಂತ ಕಳಪೆ ಬಜೆಟ್ ಇದಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.