ರಾಜ್ಯದಲ್ಲಿ ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಸರಕಾರ ಲೂಟಿ.

ಕಾರ್ಕಳ:  ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಸರಕಾರ ರಾಜ್ಯವನ್ನು ಲೂಟಿ ಹೊಡೆಯಲು ಹೊರಟಿದೆ. ಪೆಟ್ರೋಲ್ ಮೇಲಿನ ರಾಜ್ಯ ಸೆಸ್ ನ್ನು ಪ್ರತಿ ಲೀಟರ್ ಮೇಲೆ 3 ರೂ. ಹೆಚ್ಚಳ ಮಾಡುವ ಆದೇಶಕ್ಕೆ ಸಹಿ ಹಾಕುವ ಮೂಲಕ ಸಿಎಂ ಸಿದ್ದರಾಮಯ್ಯ ಖಾಲಿಯಾದ ಬೊಕ್ಕಸ ತುಂಬಿಕೊಳ್ಳಲು ಹೊರಟಿದ್ದಾರೆ ಎಂದು ಶಾಸಕ ವಿ ಸುನಿಲ್ ಕುಮಾರ್ ವಾಗ್ದಾಳಿ ಮಾಡಿದ್ದಾರೆ.

ಲಭ್ಯ ಇರುವ ಎಲ್ಲ ಆದಾಯ ಮೂಲಗಳಿಂದ ಸರಕಾರ ಜನರನ್ನು ಎಷ್ಟು ಸುಲಿಗೆ ಮಾಡಿದರೂ ರಾಜಸ್ವ ಸಂಗ್ರಹ ದಿನೇ ದಿನೇ ಕುಸಿದು ಬೀಳುತ್ತಿದೆ. ಈ ವರ್ಷದ ತೆರಿಗೆ ಸಂಗ್ರಹಣೆಯಲ್ಲಿ 13 ಸಾವಿರ ಕೋಟಿ ಕೊರತೆ ಸೃಷ್ಟಿಯಾಗಿರುವುದರಿಂದ ರಾಜ್ಯ ಸರಕಾರ ಧೂಮಕೇತುವಿನ ರೀತಿ ಜನಸಾಮಾನ್ಯರ ಮೇಲೆ ಎರಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಹಿಂದೆ ಕೇಂದ್ರ ಸರಕಾರ ವಿರುದ್ಧ ಇಂಧನ ದರ ಇಳಿಕೆಗಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಆದರೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್ ಸೆಸ್ ಇಳಿಕೆ ಮಾಡಿದರೂ ಕರ್ನಾಟಕ ಸರಕಾರ ಮಾತ್ರ ತೆಪ್ಪಗಿತ್ತು. ಬಜೆಟ್ ಗೆ ಮುನ್ನವೇ ಪೆಟ್ರೋಲಿಯಂ ಉತ್ಪನಗಳ ಮೇಲಿನ ಸೆಸ್ ಏರಿಕೆ ಮಾಡಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ವೈದ್ಯಶಿಕ್ಷಣ ಸೇರಿದಂತೆ ವೃತ್ತಿ ಶಿಕ್ಷಣ ಶುಲ್ಕವನ್ನು ಶೇ.10ರಷ್ಟು ಏರಿಕೆ ಮಾಡಿದ್ದ ಸರಕಾರ ಪೆಟ್ರೋಲಿಗೆ ಬೆಂಕಿ ಹಚ್ಚಿದೆ. ಸರಕಾರ ಈ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದು ಅನಿವಾರ್ಯ. ಭವಿಷ್ಯದಲ್ಲಿ ಕಾಂಗ್ರೆಸ್ ಸರಕಾರ ಉಸಿರಾಡುವುದಕ್ಕೂ ತೆರಿಗೆ ಹಾಕುವುದು ಗ್ಯಾರಂಟಿ ಎಂದು ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.