ರಾಜ್ಯದಲ್ಲಿರುವುದು ಔರಂಗಜೇಬನ ಸರಕಾರ- ಹರೀಶ್ ಪೂಂಜ

ಉಡುಪಿ: ದೇಶದಲ್ಲಿ ಔರಂಗಜೇಬನ ರೀತಿಯಲ್ಲಿ ಆಡಳಿತ ನಡೆಸುವವರು ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯನವರು ಮಾತ್ರ. ಔರಂಗಜೇಬನಿಗೂ ಸಿದ್ದರಾಮಯ್ಯನವರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.

ರಾಜ್ಯ ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಅನುದಾನ ನೀಡಿಲ್ಲ ಎಂದು ಆರೋಪಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿಯ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

Oplus_131072

ರಾಜ್ಯದಲ್ಲಿ ತೆರಿಗೆ ಲೂಟಿ ಮಾಡುವ ಸಿದ್ದರಾಮಯ್ಯ ಅವರಿಗೆ ಔರಂಗಜೇಬನೇ ಪ್ರೇರಣೆ. ತೆರಿಗೆ ಮೂಲಕ ಬಹುಸಂಖ್ಯಾತ ಹಿಂದೂಗಳ ಹಣವನ್ನು ದೋಚಿ ಮುಸ್ಲಿಮರಿಗೆ ವಿವಿಧ ಯೋಜನೆಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಬೀದರ್‌ನಿಂದ ಚಾಮರಾಜನಗರದ ವರೆಗೆ, ಕೋಲಾರದಿಂದ ಉಡುಪಿವರೆಗೆ ಅತ್ಯಾಚಾರ, ಅನಾಚಾರಗಳು ತಾಂಡವವಾಡುತ್ತಿವೆ. 2028ರವರೆಗೆ ಸಿದ್ದರಾಮಯ್ಯನವರನ್ನು ಕುರ್ಚಿಯಲ್ಲಿ ಕೂರಲು ಬಿಡುವುದಿಲ್ಲ. ಅದಕ್ಕಿಂತ ಮೊದಲೇ ಸಂಭಾಜಿಯ ತರಹ ಕಾಂಗ್ರೆಸ್ ಸರ್ಕಾರವನ್ನು ಹೊಡೆದೋಡಿಸುತ್ತೇವೆ ಎಂದು ಗುಡುಗಿದರು.

ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಇಂದು ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಿಂದೂಗಳಿಗೆ ಯಾವ ಗೌರವವನ್ನೂ ನೀಡಲಾಗುತ್ತಿಲ್ಲ. ಅವರನ್ನು ಮೂರನೇ ದರ್ಜೆಯವರನ್ನಾಗಿ ನೋಡಲಾಗುತ್ತಿದೆ. ಉಡುಪಿ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ದೂರಿದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಿಲ್ಲೆಯಲ್ಲಿ ಜನ ವಿರೋಧಿ ಅಧಿಕಾರಿಗಳನ್ನು ನೇಮಕ ಮಾಡಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದಬ್ಬಾಳಿಕೆ ಮಾಡಿರುವ ಅಧಿಕಾರಿಗಳನ್ನು ನೀರಿಲ್ಲದ ಜಾಗಕ್ಕೆ ಹಾಕುವ ಕೆಲಸ ಮಾಡಲಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮೊದಲು ಕಡಿಯಾಳಿಯ ಬಿಜೆಪಿ ಕಚೇರಿಯಿಂದ ಕಲ್ಸಂಕ ಪಾರ್ಕಿಂಗ್‌ವರೆಗೆ ಮೆರವಣಿಗೆ ನಡೆಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್‌ಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕುಮಾ‌ರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾ‌ರ್ ಕುಂದಾಪುರ, ಬಿಜೆಪಿ ನಗರ ಮಂಡಲ ಅಧ್ಯಕ್ಷ ದಿನೇಶ ಅಮೀನ್, ಮಂಗಳೂರು ವಿಭಾಗ ಪ್ರಮುಖ ಉದಯಕುಮಾರ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಶ್ರೀನಿಧಿ ಹೆಗ್ಡೆ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಪಾಲ್ಗೊಂಡಿದ್ದರು.