ಉಡುಪಿ: ಜಿಲ್ಲೆಯಲ್ಲಿ ರಸ್ತೆ ಅಪಘಾತ ಪ್ರಕರಣಗಳಿಂದ ಅನೇಕ ಸಾವು-ನೋವುಗಳು ಉಂಟಾಗುತ್ತಿವೆ. ಇವುಗಳ ನಿಯಂತ್ರಣಕ್ಕೆ ಅಗತ್ಯವಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಅಪಘಾತ ಪ್ರಕರಣಗಳನ್ನು ಸಾಧ್ಯವಾದಷ್ಟು ನಿಯಂತ್ರಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.
ಅವರು ಗುರುವಾರ ನಗರದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಜಿಲ್ಲೆಯಲ್ಲಿ ರಸ್ತೆ ಅಪಘಾತ ಪ್ರಕರಣಗಳು ಪ್ರತಿ ವರ್ಷವೂ ಹೆಚ್ಚುತ್ತಿವೆ ಕಳೆದ ವರ್ಷದಲ್ಲಿ 1284 ರಸ್ತೆ ಅಪಘಾತ ಪ್ರಕರಣಗಳಾಗಿ 222 ಜನ ಮೃತಪಟ್ಟರೆ 1381 ಪ್ರಕರಣದಲ್ಲಿ ಸಾಮಾನ್ಯ ಹಾಗೂ ತೀವ್ರತರದ ಗಾಯಗಳು ಉಂಟಾಗಿದೆ. ಇವುಗಳಲ್ಲಿ ಹೆಚ್ಚಾಗಿ ಶೇ.90 ಅತೀವೇಗದ ವಾಹನ ಚಾಲನೆ ಹಾಗೂ ಅಜಾಗುರುಕತೆಯಿಂದ ಉಂಟಾಗಿದೆ. ಅಲ್ಲದೇ ಕೆಲವು ಅವೈಜ್ಞಾನಿಕ ರಸ್ತೆ ಕಾಮಗಾರಿಗಳಿಂದ ಆಗಿವೆ ಪೊಲೀಸ್ ಇಲಾಖೆಯು ಈಗಾಗಲೇ 21 ಸ್ಥಳಗಳನ್ನು ಬ್ಲಾಕ್ ಸ್ಪಾಟ್‌ಗಳೆಂದು ಗುರುತಿಸಿದೆ ಎಂದರು.
ಕಳೆದ ರಸ್ತೆ ಸುರಕ್ಷತಾ ಸಮೀತಿ ಸಭೆಯಲ್ಲಿ 21 ಬ್ಲಾಕ್ ಸ್ಪಾಟ್‌ಗಳಲ್ಲಿ ರಸ್ತೆ ಸುಧಾರಣೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಹಾಗೂ ಇತರ ಇಲಾಖೆಗಳಿಗೆ ಸೂಚಿಸಿದ್ದು, ಅವುಗಳಲ್ಲಿ ಬಹುತೇಕ ಕಾಮಗಾರಿಗಳನ್ನು ಕೈಗೊಂಡಿರುದಾಗಿ ತಿಳಿಸಿರುತ್ತಾರೆ, ಇವುಗಳಲ್ಲಿ ಪೊಲೀಸ್ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ ವರದಿಯನ್ನು ಶೀಘ್ರವಾಗಿ ನೀಡಬೇಕು ಎಂದು ಸೂಚನೆ ನೀಡಿದ ಅವರು ಬಾಕಿ ಉಳಿದ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೊಳ್ಳಲು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಪ್ರತಿಯೊಬ್ಬ ಸಾರ್ವಜನಿಕರು ವಾಹನದಲ್ಲಿ ಸಂಚಾರಿಸುವಾಗ ತಪ್ಪದೇ ರಸ್ತೆ ಸುರಕ್ಷಿತ ನಿಯಮಗಳನ್ನು ಪಾಲಿಸಬೇಕು, ಜಿಲ್ಲಾ ಸಾರಿಗೆ ಪ್ರಾಧಿಕಾರ ಸೂಚಿಸಿರುವ ವೇಗ ಮಿತಿಯಲ್ಲಿ ಸಂಚರಿಸಬೇಕು. ಹೆಚ್ಚಾಗಿ ಜಿಲ್ಲೆಯಲ್ಲಿ ಮಳೆ ಬರುತ್ತಿರುವ ಹಿನ್ನಲೆ ರಸ್ತೆಗಳಲ್ಲಿ ಹೊಂಡಗಳು ಉಂಟಾಗಿದೆ ಹಾಗೂ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಕೈಗೊಂಡಿರುವ ಸ್ಥಳಗಳಲ್ಲಿ ವಾಹನಗಳನ್ನು ನಿಧಾನವಾಗಿ ಹಾಗೂ ಜಾಗರುಕತೆಯಿಂದ ಚಾಲನೆ ಮಾಡಿದ್ದಲ್ಲಿ ಮಾತ್ರ ಅಪಘಾತಗಳನ್ನು ತಪ್ಪಿಸಲು ಸಾಧ್ಯ ಇದಕ್ಕೆ ಸಾರ್ವಜನಿಕರು ಸಹ ಒತ್ತು ನೀಡಬೇಕು ಎಂದರು.
ಜಿಲ್ಲೆಯಲ್ಲಿ ಗುರುತಿಸಿರುವ 21 ಕಪ್ಪು ಚುಕ್ಕೆಗಳು ಬಹುತೇಕ ಜಂಕ್ಷನ್‌ಗಳಾಗಿದ್ದು ಇಲ್ಲಿಯ ಅಪಘಾತ ಉಂಟಾಗಿದೆ. ಕಾರಣ ಒಳ ರಸ್ತೆಯಿಂದ ಬರುವ ವಾಹನ ವೇಗವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಪ್ರವೇಶಿಸುವುದರಿಂದ ಅಪಘಾತವಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಈ ಸ್ಥಳಗಳಲ್ಲಿ ಪಾದಚಾರಿ ಕ್ರಾಸಿಂಗ್, ಝಿಬ್ರ ಕ್ರಾಸಿಂಗ್, ಸೂಚಕ ಫಲಕಗಳು ಹಾಗೂ ಅವಶ್ಯಕತೆ ಇದ್ದ ಕಡೆಯಲ್ಲಿ ಹಂಪ್ಸ್ ಅನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿ ವರ್ಷ ಅಪಘಾತ ವಲಯದ ಕಪ್ಪು ಚುಕ್ಕೆ ಸ್ಥಳಗಳ ಗುರುತಿಸುವುದು ಅಲ್ಲಿ ಸುರಕ್ಷತಾ ನಿರ್ವಹಣೆ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಕೈಗೊಳ್ಳಬೇಕು. ಅಪಘಾತದಿಂದ ಮರಣ ಸಂಖ್ಯೆಗಳನ್ನು ಕಡಿಮೆಗೊಳಿಸಲು ಟ್ರಾಮ್ ಕೇರ್ ಸೆಂಟರ್‌ಗಳ ಮ್ಯಾಪಿಂಗ್ ಮತ್ತು ಸಜ್ಜುಗೊಳಿಸುವಿಕೆ ಹಾಗೂ ಟ್ರಾಮ್ ಕೇರ್ ಸೆಂಟರ್‌ಗಳೊಂದಿಗೆ ಅಂಬುಲೆನ್ಸ್ ಮ್ಯಾಪಿಂಗ್ ಮಾಡಬೇಕು ಪ್ರತಿ ತಿಂಗಳು ರಸ್ತೆ ಸುರಕ್ಷತೆ ಸಮಿತಿ ಸಭೆಯನ್ನು ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ ಶೇ.2 ರಷ್ಟು ಹೆದ್ದಾರಿಗಳಿದ್ದು ಶೇ.35 ರಷ್ಟು ಅಪಘಾತಗಳು ಇಲ್ಲಿಗೆ ಆಗಿವೆ ಶೇ. 9 ರಷ್ಟು ರಾಜ್ಯ ಹೆದ್ದಾರಿಯಲ್ಲಿ ಶೇ. 28 ರಷ್ಟು ಹಾಗೂ ಮುನ್ಸಿಪಾಲ್ ರಸ್ತೆ, ಗ್ರಾಮೀಣ ರಸ್ತೆಗಳು ಶೇ. 89 ರಷ್ಟಿದ್ದು, ಶೇ 37 ರಷ್ಟು ರಸ್ತೆ ಅಪಘಾತಗಳು ಇಲ್ಲಿ ಆಗಿವೆ. ಹೆಚ್ಚಾಗಿ ಮರಣ ಪ್ರಕಾರಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಿದ್ದು ಗಮನರ್ಹ ಜಿಲ್ಲೆಯ 21 ಬ್ಲಾಕ್ ಸ್ಪಾಟ್‌ಗಳಲ್ಲಿ 18 ನಮ್ಮ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿವೆ ಎಂದರು.
ಸಭೆಯಲ್ಲಿ ಎಎಸ್‌ಪಿ ಸಿದ್ದಲಿಂಗಪ್ಪ ಟಿ, ಕಾರ್ಯಪಾಲಕ ಅಭಿಯಂತರರು ಕಿರಣ್ ಎಸ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮದ್ ಅಜ್ಮಿ, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮಿ ನಾರಾಯಣ್, ಪೌರಾಯುಕ್ತ ರಾಯಪ್ಪ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.