ಉಡುಪಿ: ಯುವ ಜನತೆ ಅನಗತ್ಯ ವಿಚಾರಗಳಲ್ಲಿ ಸಮಯ ವ್ಯರ್ಥ ಮಾಡದೇ, ಶೈಕ್ಷಣಿಕ ಬೆಳವಣಿಗೆಯ ಕಡೆ ಗಮನಹರಿಸುವ ಮೂಲಕ ತಮ್ಮ ಬದುಕು ರೂಪಿಸಲು ಈಗಿನಿಂದಲೇ ದೃಢ ನಿರ್ಧಾರ ಕೈಗೊಂಡು ಉತ್ತಮ ಭವಿಷ್ಯದ ನಿರ್ಮಾಣದತ್ತ ಹೆಜ್ಜೆ ಹಾಕಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಹೇಳಿದರು.
ಅವರು ಶನಿವಾರ ನಗರದ ಅಮೃತ್ ಗಾರ್ಡನ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,
ಲಯನ್ಸ್ ಕ್ಲಬ್ ಅಮೃತ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಐಕ್ಯುಎಸಿ ಮತ್ತುರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಯುವಜನೋತ್ಸವ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಸ್ತುತ ವಿದ್ಯಮಾನಗಳನ್ನು ಅವಲೋಕಿಸಿದಾಗ ನಮ್ಮ ದೇಶವನ್ನು ಹೊರತುಪಡಿಸಿ ವಿವಿಧೆಡೆ ಸಾಮಾಜಿಕ ಅಸ್ಥಿರತೆ ಇದ್ದು, ಇದರ ಪರಿಣಾಮ ಯುವಜನರ ಮೇಲೆ ಉಂಟಾಗುತ್ತದೆ. ನಮ್ಮ ದೇಶದಲ್ಲಿ ಬೇಧ, ಭಾವ, ಜಾತಿ ತಾರತಮ್ಯವಿಲ್ಲದೇ ಸಂವಿಧಾನದ ಆಶಯದಂತೆ ನಾವು ಭಾರತೀಯರು, ನಾವೆಲ್ಲರೂ ಒಂದೇ ಎಂಬ ಸಮಾನತೆಯ ಭಾವನೆಯನ್ನು ಬೆಳೆಸಿಕೊಂಡು ಜೀವನ ನಡೆಸಬೇಕು ಎಂದರು.
ಯುವ ಜನತೆ ನಮ್ಮ ದೇಶದ ಸಂಪತ್ತು. ಯುವಜನತೆಗೆ ಸರಿಯಾದ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದಾಗ ಅವರುಗಳನ್ನು ನಮ್ಮ ದೇಶದ ಆಸ್ತಿಯಾಗಿ ದೇಶದ ಅಭಿವೃದ್ಧಿಗೆ ಅವರನ್ನು ತೊಡಗಿಸಿಕೊಳ್ಳಬಹುದಾಗಿದೆ ಎಂದರು.
ಪರಿಶ್ರಮ ಇಲ್ಲದೇ ಜೀವನದಲ್ಲಿ ಸಾರ್ಥಕತೆ ಕಾಣಲು ಸಾಧ್ಯವಿಲ್ಲ. ಶಿಕ್ಷಣದ ಜೊತೆಗೆ ಯುವಜನರು ಗ್ರಂಥಾಲಯಗಳ ಸದುಪಯೋಗ
ಪಡೆದುಕೊಳ್ಳಬೇಕು. ಇದರಿಂದ ಜ್ಞಾನ ವಿಸ್ತಾರವಾಗುತ್ತದೆ. ಓದು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿರಬಾರದು. ಸ್ಪರ್ಧಾತ್ಮಕ
ಪರೀಕ್ಷೆಗಳಿಗೆ ತಯಾರಿಯ ಜೊತೆಗೆ ಮಹಾತ್ಮರ ಕೃತಿಗಳನ್ನು ಓದುವ ಮೂಲಕ ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಯುವ ಜನೋತ್ಸವ ಕಾರ್ಯಕ್ರಮವು ರಾಷ್ಟ್ರೀಯ ಏಕೀಕರಣದ ಪರಿಕಲ್ಪನೆ, ಕೋಮು ಸೌಹಾರ್ದತೆಯ ಮನೋಭಾವ, ಸಹೋದರತ್ವ, ಧೈರ್ಯ ಮತ್ತು ಸಾಹಸವನ್ನು
ಪ್ರದರ್ಶಿಸುವ ವೇದಿಕೆಯಾಗಿದೆ. ಇದನ್ನು ಯುವಜನರು ಸಮರ್ಪಕ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಶಾಂತಿಯ ಸಂಸ್ಕಾರವನ್ನು ಸಮಾಜದ ನಾಗರಿಕರಲ್ಲಿ ಬೆಳೆಸುವ ಉದ್ದೇಶದಿಂದಅಂತಾರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲಾಗುತ್ತಿದೆ. ನಾಗರಿಕರು ಸಂವಿಧಾನದಲ್ಲಿ ನೀಡಿರುವ ಹಕ್ಕಗಳನ್ನು ಕಾಪಾಡಿದ್ದಲ್ಲಿ ಹಾಗೂ ಕರ್ತವ್ಯಗಳನ್ನು ಪಾಲಿಸಿದ್ದಲ್ಲಿ
ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಯುವ ಜನರ ಹೊಸ ಆಯಾಮದ ಯೋಜನೆ, ಆವಿಷ್ಕಾರಗಳು, ದೇಶದ ಸಾಮಾಜಿಕ ಹಾಗೂ ಆರ್ಥಿಕ
ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದರು.
ರೆಡ್‌ಕ್ರಾಸ್ ರಾಜ್ಯ ಶಾಖೆ ಆಡಳಿತ ಮಂಡಳಿಯ ಸದಸ್ಯ ವಿ.ಜಿ ಶೆಟ್ಟಿ ಮಾತನಾಡಿ, ಯಶಸ್ಸು, ಸಾಧನೆ, ಪ್ರಗತಿಯನ್ನು ಸಾಧಿಸಲು ಸಮಾಜದಲ್ಲಿ ಶಾಂತಿ, ಸ್ನೇಹ, ಬಾಂಧವ್ಯ, ಸೌಹಾರ್ದತೆ ಅಗತ್ಯವಾಗಿದೆ. ಯುವ ಜನರು ದೇಶದ ಭವಿಷ್ಯ. ಯುವ ಜನರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜನಪದ ನೃತ್ಯ, ಜನಪದ ಹಾಡು, ಕಥೆ ಬರೆಯುವುದು, ಕವಿತೆ ಬರೆಯುವುದು, ಚಿತ್ರಕಲೆ, ಭಿತ್ತಿ ಪತ್ರ ತಯಾರಿಕೆ ಹಾಗೂ ಘೋಷಣೆ ಸ್ಪರ್ಧೆಗಳು ನಡೆದವು.
ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್‌ನ ಕಾರ್ಯದರ್ಶಿ ಗಣನಾಥ್ ಎಕ್ಕಾರು, ಲಯನ್ಸ್ ಅಮೃತ್ ಉಡುಪಿಯ ಭಾರತಿ ಹರೀಶ್, ಗೌರವ ಖಜಾಂಜಿ ರಮಾದೇವಿ, ರೆಡ್‌ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳಾದ ಬಾಲಕೃಷ್ಣ ಶೆಟ್ಟಿ ಮತ್ತು ಟಿ ಚಂದ್ರಶೇಖರ್, ಲಯನ್ಸ್ ಕ್ಲಬ್
ಅಮೃತ್‌ನ ಪದಾಧಿಕಾರಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.