ಉಡುಪಿ: ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿಗಳು ನಿಲ್ಲುವುದಿಲ್ಲ. ಸಾಕಷ್ಟು ಮುಂದಾಲೋಚನೆ ಇಟ್ಟುಕೊಂಡೆ ಪಂಚ ಯೋಜನೆ ಜಾರಿಗೆ ತಂದಿದ್ದೇವೆ. ಮಹಿಳೆಯರ ಆರ್ಥಿಕ ಸಬಲೀಕರಣ ಮಾಡಲು ಗ್ಯಾರಂಟಿ ತಂದಿದ್ದೇವೆ. ಶಕ್ತಿ ಯೋಜನೆ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಉಡುಪಿಯಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ದೇಶದಲ್ಲೇ ಪ್ರಥಮ ಬಾರಿಗೆ ಪಂಚ ಗ್ಯಾರಂಟಿ ಜಾರಿ ಮಾಡಿದ್ದೇವೆ. ಆ ಮೂಲಕ ಚುನಾವಣಾಪೂರ್ವ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಈಗ ಪಂಚ ಗ್ಯಾರಂಟಿಗಳು ಕರ್ನಾಟಕ ರಾಜ್ಯದ ಮಾಡೆಲ್ ಆಗಿದೆ. ಈ ಮಾಡೆಲನ್ನು ಇಡೀ ದೇಶದಲ್ಲಿ ಯೂಟಿಲೈಸ್ ಮಾಡುತ್ತಿದ್ದಾರೆ. ಗ್ಯಾರೆಂಟಿಗಳನ್ನ ಕರ್ನಾಟಕ ಮಾಡೆಲ್ ಎಂದು ಕಾಂಗ್ರೆಸ್ ಪಕ್ಷ ದೇಶದ ವಿವಿಧ ರಾಜ್ಯದಲ್ಲಿ ಜಾರಿ ಮಾಡುತ್ತಿದೆ ಎಂದರು.
ಡಿಕೆ ಶಿವಕುಮಾರ್ ಅವರನ್ನು ನಾವು ಇವತ್ತು ನೋಡುತ್ತಿಲ್ಲ. ಅವರು ಅಧ್ಯಕ್ಷರಾದಾಗ ಕೋವಿಡ್ ಇತ್ತು. ರಾಜ್ಯದಲ್ಲಿ ಓಡಾಡುವಾಗ ಬಹಳಷ್ಟು ಮಹಿಳೆಯರು ಬೆಲೆ ಏರಿಕೆ ಬಗ್ಗೆ ಅಳಲು ತೋಡಿಕೊಂಡಿದ್ದರು. ಈ ಬಗ್ಗೆ ಏನಾದರೂ ಮಾಡಬೇಕು ಎಂದು ಯೋಚಿಸಿದ್ದರು. ಬೆಲೆ ಏರಿಕೆ ಕಡಿಮೆ ಮಾಡಲು ಈ ಯೋಜನೆಗಳನ್ನು ತಂದರು.
ಈ ಯೋಜನೆ ಬಗ್ಗೆ ವಿಚಾರ ಮಾಡಿದವರೇ ಡಿಕೆ ಶಿವಕುಮಾರ್. ಮಹಿಳೆಯರ ಜೊತೆ ಚರ್ಚೆ ಸಂವಾದ ಮಾಡಿ ಗ್ಯಾರಂಟಿ ಯೋಜನೆಗಳನ್ನು ಜಾರಿ ತಂದಿದ್ದಾರೆ.ಈ ಯೋಜನೆಯಿಂದ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗಿದೆ. ಹೀಗಾಗಿ ಯಾವುದೇ ಪರಿಸ್ಥಿತಿಯಲ್ಲಿ ಪಂಚ ಗ್ಯಾರಂಟಿಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಭರವಸೆ ನೀಡಿದರು.