ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿಯ ಪ್ರಸಿದ್ಧ ಗಾಂಧಿ ಆಸ್ಪತ್ರೆ ಮೂವತ್ತನೆ ಸಂವತ್ಸರಕ್ಕೆ ಪಾದಾರ್ಪಣೆ ಮಾಡುತ್ತಿರುವ ಸುಸಂದರ್ಭದಲ್ಲಿ ಹಾಗೂ ಪಂಚಮಿ ಟ್ರಸ್ಟ್, ಪಂಚಲಹರಿ ಪೌ೦ಡೇಶನ್ ಪ್ರಾಯೋಜಕತ್ವದಲ್ಲಿ ಮೇ15ರಂದು ಖ್ಯಾತ ಬಾಲಕಿ ಗಂಗಾ ಶಶಿಧರನ್ ಗುರುವಾಯೂರು ಹಾಗೂ ಅವರ ಗುರು ಅನುರೂಪ್ ಗುರುವಾಯೂರು ಮತ್ತು ತಂಡದವರಿಂದ ವಯೊಲಿನ್ ವಾದನ ನಡೆಯಲಿದೆ.
ತ್ರಿಶೂರ್ ನ ಹತ್ತು ವರ್ಷದ ಪುಟ್ಟ ಬಾಲಕಿ ಗಂಗಾ ಶಶಿಧರನ್ ವಯೊಲಿನ್ ವಾದನದ ಮೂಲಕ ನಾಡಿನ ಸಮಸ್ತರ ಗಮನ ಸೆಳೆದಿದ್ದಾಳೆ. ಸತತ ಪರಿಶ್ರಮದ ಮೂಲಕ ಎಳವೆಯಲ್ಲಿಯೇ ಅದ್ಭುತವಾದ ವಯೊಲಿನ್ ನುಡಿಸುವ ಮೂಲಕ ಸಂಗೀತ ಪ್ರಿಯರ ಮನ ಗೆದ್ದಿದ್ದಾಳೆ.
ಗುರುವಾಯೂರು ದೇವಸ್ಥಾನದ ವೇದಿಕೆಯಲ್ಲಿ ವಯೊಲಿನ್ ಕಛೇರಿ ನಡೆದಾಗಲೆಲ್ಲ ಒಂದೂವರೆ ವರ್ಷದ ಗಂಗಾ ತನ್ನ ತಾಯಿಯೊಂದಿಗೆ ವೀಕ್ಷಕರಲ್ಲಿ ಒಬ್ಬಳಾಗಿದ್ದಳು. ಕಛೇರಿ ಮುಗಿಯುವವರೆಗೂ ಎದ್ದೇಳುತ್ತಿ ರಲಿಲ್ಲ. ವಯಲಿನ್ ನಲ್ಲಿ ಅಷ್ಟೊಂದು ಆಸಕ್ತಿ ಇದ್ದ ಆ ಒಂದೂವರೆ ವರ್ಷದ ಬಾಲಕಿಗೆ ಇದೀಗ ಹತ್ತು ವರ್ಷ.
ಈಕೆ ಅದೇ ವೇದಿಕೆಯಲ್ಲಿ ವಯೊಲಿನ್ ನಲ್ಲಿ ಜಾದೂ ಪ್ರದರ್ಶಿಸಿ ಎಲ್ಲರನ್ನು ಬೆರಗುಗೊಳಿಸುವ ತಾರೆಯಾದ ಕಥೆ ಅವಿಸ್ಮರಣೀಯ. ಪಿಟೀಲು ಅಥವಾ ವಯೊಲಿನ್ ಭಾರತೀಯ ಹಾಗು ಪಾಶ್ಚಾತ್ಯ ಸಂಗೀತ ಪರಿಕರಗಳಲ್ಲಿ ಜನಪ್ರಿಯವಾದ ತಂತಿ ವಾದ್ಯ.
ದಕ್ಷಿಣ ಆಫ್ರಿಕಾ, ಸ್ವಿಟ್ಜರ್ಲೆಂಡ್, ದೆಹಲಿ ಮತ್ತು ಬೆಂಗಳೂರಿಗೆ ಆಹ್ವಾನಗಳೊಂದಿಗೆ ಕೇರಳ ಮತ್ತು ಹೈದರಾ ಬಾದ್ನಲ್ಲಿ ಅನೇಕ ಸ್ಥಳಗಳಲ್ಲಿ ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟಿದ್ದಾಳೆ. ಕಳೆದ ನವೆಂಬರ್ನಲ್ಲಿ ಗುರುವಾಯೂರು ದೇವಸ್ಥಾನ ದಲ್ಲಿ ನಡೆದ ಜುಗಲ್ಬಂದಿ, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆದ ನಂತರ ಗಂಗಾ ಸ್ಟಾರ್ ವಾದಕಿ ಆದರು.
ಡಿಸೆಂಬರ್ನಲ್ಲಿ ವೈಕಂ ಮಹಾದೇವ ದೇವಸ್ಥಾನದಲ್ಲಿ ವೈಕಥಾಷ್ಟಮಿಯ ಸಂಗೀತ ಕಾರ್ಯಕ್ರಮವೂ ವೈರಲ್ ಆಗಿತ್ತು. ಖಾಸಗಿ ವಾಹಿನಿಗಳ ಕಾರ್ಯಕ್ರಮಗಳಲ್ಲೂ ಅತಿಥಿಯಾಗಿ ಭಾಗವಹಿಸಿದ್ದರು.
ಅಯಿರೂರು ಎಯುಪಿಎಸ್ನ ಐದನೇ ತರಗತಿಯ ವಿದ್ಯಾರ್ಥಿನಿ ಗಂಗಾ ನೃತ್ಯವನ್ನೂ ಕಲಿಯುತ್ತಿದ್ದಾಳೆ. ತಾಯಿ ಕೃಷ್ಣವೇಣಿ ಕೂಡ ವಯೊಲಿನ್ ಬಾರಿಸುತ್ತಿದ್ದರು. ತಂದೆ ಶಶಿಧರನ್ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ನಾಲ್ಕೂವರೆ ವಯಸ್ಸಿನಲ್ಲಿ ವಯೊಲಿನ್ ಕಲಿಯಲು ಆರಂಭಿಸಿ, ಏಳನೇ ವಯಸ್ಸಿನಲ್ಲಿ ವೇದಿಕೆಯಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದಳು.
ಗಂಗಾ ಆಕಾಶವಾಣಿ ಎ ಗ್ರೇಡ್ ಕಲಾವಿದ ಸಿ.ಎಸ್ ಅನುರೂಪ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಮೊದಲ ಬಾರಿಗೆ ಪಿಟೀಲು ನುಡಿಸುವಾಗ ಕೈಗೆ ಗಾಯವಾದಾಗ ಭಯಪಡಬೇಡಿ ಎಂದು ಶಿಕ್ಷಕರು ಹೇಳಿದಾಗ ಭಯ ಪಡುವುದಿಲ್ಲ, ಕಲಿಯುತ್ತೇನೆ ಅಂದಿದ್ದಳಂತೆ.
ಇದೀಗ ಉಡುಪಿಯಲ್ಲಿ ಆಕೆಯ ವಯೊಲಿನ್ ವಾದನ ಕಾರ್ಯಕ್ರಮವು ಮೇ.15 ರಂದು ಸಂಜೆ ರಾಜಾಂಗಣದಲ್ಲಿ ನಡೆಯಲಿದ್ದು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ. ಹರಿಶ್ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.