ಮೂಡುಬಿದಿರೆ:ಕಂಬಳ ನಿಯಮ ಮೀರುವ ಸದಸ್ಯರಿಗೆ ನಿಷೇಧ:ಜಿಲ್ಲಾ ಕಂಬಳ ಸಮಿತಿ ಎಚ್ಚರಿಕೆ

ಮೂಡುಬಿದಿರೆ: ಕಂಬಳವನ್ನು ಸಮಯಪಾಲನೆ ಯೊಂದಿಗೆ ಶಿಸ್ತುಬದ್ಧವಾಗಿ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಗಂತಿನಲ್ಲಿ ಕೋಣಗಳನ್ನು ಬಿಡುವವರು ಅನಗತ್ಯವಾಗಿ ವಿಳಂಬ ಮಾಡಿದರೆ ಅಥವಾ ಮಂಜೊಟ್ಟಿ ಮತ್ತು ಗಂತಿನಲ್ಲಿ ಓಟಗಾರರು ಕೋಣಗಳಿಗೆ ಹೊಡೆದು ಹಿಂಸೆ ನೀಡುವುದು ಸಾಬೀತಾದರೆ ಅಂತವರು ಮುಂದಿನ ಎರಡು ಕಂಬಳಗಳಲ್ಲಿ ಬಾಗವಹಿಸಲು ನಿರ್ಬಂಧ ಹೇರಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿಖಡಕ್ ಎಚ್ಚರಿಕೆ ನೀಡಿದೆ.

ಒಂಟಿಕಟ್ಟೆಯಲ್ಲಿರುವ ಸೃಷ್ಟಿ ಗಾರ್ಡನ್ ಸಭಾಭವನದಲ್ಲಿ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ಡಾ. ದೇವಿ ಪ್ರಸಾದ್ ಶೆಟ್ಟಿ ಅವರು ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಜಿಲ್ಲಾ ಕಂಬಳ ಸಮಿತಿಯ ತುರ್ತು ಸಭೆಯಲ್ಲಿ ಈ ಕುರಿತು ನಿರ್ಣಯಿಸಲಾಯಿತು.

ಸಭೆಯಲ್ಲಿ ಮಾತನಾಡಿದ ದೇವಿ ಪ್ರಸಾದ್ ಶೆಟ್ಟಿ, 24 ಗಂಟೆಗಳಲ್ಲಿ ಮುಕ್ತಾಯಗೊಳ್ಳಬೇಕಾಗಿದ್ದ ಕಂಬಳಗಳು ಇದೀಗ ಹೆಚ್ಚಿನ ಕಡೆಗಳಲ್ಲಿ ವಿನಾ ಕಾರಣ ವಿಳಂಬಗೊಳ್ಳುತ್ತಿದೆ. ಇದು ಸರಕಾರದ ನಿಯಮಗಳಿಗೆ ವಿರುದ್ಧವಾಗಿದ್ದು, ನಾವು ಸುಧಾ ರಣೆಗೊಳ್ಳದಿದ್ದರೆ ಕಂಬಳ ನಿಷೇಧಕ್ಕೆ ನಾವೇ ಅವಕಾಶ ಕಲ್ಪಿಸಿಕೊಟ್ಟಂತ್ತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಒಬ್ಬ ಓಟಗಾರರನಿಗೆ ಪ್ರತಿ ವಿಭಾಗದಲ್ಲೂ ಒಂದು ಜೊತೆ ಕೋಣಗಳನ್ನು ಓಡಿಸಲು ಮಾತ್ರ ಅವಕಾಶವಿದೆ. ಅನಿವಾರ್ಯ ಸಂದರ್ಭದಲ್ಲಿ ತೀರ್ಪುಗಾರ ಹಾಗೂ ವ್ಯವಸ್ಥಾಪಕರ ಅನುಮತಿ ಪಡೆದ ಬಳಿಕ ಮಾತ್ರ ಎರಡು ಜೊತೆ ಕೋಣಗಳನ್ನು ಓಡಿಸಬಹುದು ಎಂದರು.

ಕೋಣಗಳ ಯಜಮಾನ ತ್ರಿಶಾಲ್ ಪೂಜಾರಿ ಮಾತನಾಡಿ, ಮೂಲ್ಕಿಯಲ್ಲಿ ನಡೆದ ಕಂಬಳದಲ್ಲಿ ನಮ್ಮ ಓಟಗಾರನ ಕಾಲಿಗೆ ಬಲವಾದ ಪೆಟ್ಟಾಗಿ ಆಸ್ಪತ್ರೆಗೆ ಆಟೋದಲ್ಲಿ ಸಾಗಿಸಲಾಗಿತ್ತು. ಇಂತಹ ತುರ್ತು ಸಂದರ್ಭದಲ್ಲಿ ಕಂಬಳ ಆಯೋಜಕರು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು. ಅಂಬ್ಯುಲೆನ್ಸ್ ಹಾಗೂ ಪ್ರಥಮ ಚಿಕಿತ್ಸೆ ಕೇಂದ್ರವನ್ನು ಎಲ್ಲ ಕಂಬಳಗಳಲ್ಲಿ ಕಡ್ಡಾಯಗೊಳಿಸಬೇಕು.

ವ್ಯವಸ್ಥಾಪಕರು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದಲ್ಲಿ ಅವರೇ ವ್ಯವಸ್ಥೆ ಯನ್ನು ಕಲ್ಪಿಸುತ್ತಾರೆ ಎಂದು ಸಮಿತಿ ಅಧ್ಯಕ್ಷರು ಹೇಳಿದರು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ, ಮಾಜಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ, ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ಹಿರಿಯ ತೀರ್ಪುಗಾರ ರಾಜೀವ್ ಶೆಟ್ಟಿ ಎಡ್ತೂರು, ಅಡ್ವೆ ಕಂಬಳದ ವ್ಯವಸ್ಥಾಪಕ ಕೊಳಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ, ವಾಮಂಜೂರು ತಿರುವೈಲು ಗುತ್ತು ಕಂಬಳದ ಆಯೋಜಕ ನವೀನ್ ಚಂದ್ರ ಆಳ್ವ ಸಹಿತ ಕಂಬಳದ ಪ್ರಮುಖರು ಉಪಸ್ಥಿತರಿದ್ದರು.