ಮಾ.27ರಂದು ವಿಶ್ವ ರಂಗಭೂಮಿ ದಿನಾಚರಣೆ, ವಿಶ್ವ ರಂಗಭೂಮಿ ಸನ್ಮಾನ ‘ಅಂಬಾತನಯ ಮುದ್ರಾಡಿ ಸಂಸ್ಕರಣಾ ಪುಸ್ತಕ ಪ್ರಶಸ್ತಿ’ ಪ್ರದಾನ ಸಮಾರಂಭ

ಉಡುಪಿ: ರಂಗಭೂಮಿ ಉಡುಪಿ ಆಶ್ರಯದಲ್ಲಿ ಎಂಜಿಎಂ ಕಾಲೇಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಇದರ ಸಹಯೋಗದಲ್ಲಿ ‘ವಿಶ್ವ ರಂಗಭೂಮಿ ದಿನಾಚರಣೆ’, ವಿಶ್ವ ರಂಗಭೂಮಿ ಸನ್ಮಾನ’ ಹಾಗೂ ”ಅಂಬಾತನಯ ಮುದ್ರಾಡಿ ಸಂಸ್ಕರಣಾ ಪುಸ್ತಕ ಪ್ರಶಸ್ತಿ ಪ್ರದಾನ’ ಸಮಾರಂಭವು ಇದೇ ಮಾ. 27ರಂದು ಸಂಜೆ 5ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಂಗಭೂಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅವರು, ಅಂದು ಸಂಜೆ 6ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿ ಎಚ್. ಗೋಪಾಲ ಭಟ್ಟ (ಕು.ಗೋ.) ಅವರಿಗೆ ‘ವಿಶ್ವ ರಂಗಭೂಮಿ ಪ್ರಶಸ್ತಿ” ಮತ್ತು ಲೇಖಕ ಎನ್. ಸಿ. ಮಹೇಶ್ ಅವರಿಗೆ ‘ಅಂಬಾತನಯ ಮುದ್ರಾಡಿ ಸಂಸ್ಕರಣಾ ಪುಸ್ತಕ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.

ರಂಗಭೂಮಿಯ ಗೌರವಾಧ್ಯಕ್ಷ ಡಾ. ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ, ಸಾಹಿತಿ ಡಾ. ಕೆ.ಎಂ‌. ರಾಘವ ನಂಬಿಯಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಭಾಸ್ಕರ್ ರಾವ್ ಕಿದಿಯೂರು, ಎನ್. ರಾಜಗೋಪಾಲ ಬಲ್ಲಾಳ್‌, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ಕೋಶಾಧಿಕಾರಿ ಭೋಜ ಯು, ಅಂಬಾತನಯ ಮುದ್ರಾಡಿ ಸಂಸ್ಕರಣಾ ಪುಸ್ತಕ ಪ್ರಶಸ್ತಿ ಸಮಿತಿಯ ಸಹ ಸಂಚಾಲಕ ಡಾ. ವಿಷ್ಣುಮೂರ್ತಿ ಪ್ರಭು ಉಪಸ್ಥಿತರಿದ್ದರು.