ಮಾ.16ರಂದು ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗೆ ಅಭಿನಂದನಾ ಕಾರ್ಯಕ್ರಮ “ಮಹಾಭಿವಂದ್ಯ”

ಉಡುಪಿ: ಆತ್ಮಾನಂದ ಸರಸ್ವತಿ ಕಿರಿಯ ತಾಂತ್ರಿಕ ಮಹಾವಿದ್ಯಾಲಯ ಬಿಲ್ಲಾಡಿ, ಧರ್ಮಸ್ಥಳ ಶ್ರೀ ರಾಮಕ್ಷೇತ್ರ ಉಡುಪಿ ಸಮಿತಿ ಎಜುಕೇಶನಲ್ ಟ್ರಸ್ಟ್ ಹಾಗೂ ಯುವವಾಹಿನಿ ಉಡುಪಿ ಘಟಕ ಇದರ ಸಹಯೋಗದಲ್ಲಿ ಕನ್ಯಾಡಿ ಶ್ರೀ ರಾಮಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಗೌರವ ಅಭಿನಂದನಾ ಕಾರ್ಯಕ್ರಮ “ಮಹಾಭಿವಂದ್ಯ” ಇದೇ ಮಾ.16ರಂದು ಸಂಜೆ 4 ಗಂಟೆಗೆ ಬನ್ನಂಜೆಯ ನಾರಾಯಣಗುರು ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ದಯಾನಂದ ಕರ್ಕೇರ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಾರ್ಯಕ್ರಮವನ್ನು ಉದ್ಯಮಿ ಡಾ. ಜಿ.ಶಂಕರ್ ಉದ್ಘಾಟಿಸಲಿದ್ದಾರೆ. ಆತ್ಮಾನಂದ ಸರಸ್ವತಿ ಕಿರಿಯ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷ ಓಬು ಪೂಜಾರಿ ಅಧ್ಯಕತೆ ವಹಿಸಲಿದ್ದಾರೆ. ಮಾಜಿ ಶಾಸಕ ರಘುಪತಿ ಭಟ್ ಅಭಿನಂದನೆ ಸನ್ನುಡಿ ನೆರವೇರಿಸಲಿದ್ದಾರೆ. ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಅಭಿನಂದನಾರ್ಪಣೆ ಮಾಡಲಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ ಸಹಿತ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ ಅವರು ಜುನಾ ಅಖಾಡದ 1008 ಮಹಾಮಂಡಲೇಶ್ವರ ಪದವಿಯೊಂದಿಗೆ ಪಟ್ಟಾಭಿಷಿಕ್ತರಾಗಿದ್ದಾರೆ. ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಮಹಾಮಂಡಲೇಶ್ವರ ಪದವಿಯನ್ನು ಪ್ರದಾನ ಮಾಡುವುದು ಅಖಾಡದ ವಾಡಿಕೆ. ಈ ಸಂತ ಪದವಿಯು ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತೀಯ ಸಂತರೊಬ್ಬರಿಗೆ ದೊರಕಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಲ್ಲಾಡಿ ಆತ್ಮಾನಂದ ಸರಸ್ವತಿ ಕಿರಿಯ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷ ಓಬು ಪೂಜಾರಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಸುವರ್ಣ, ಯುವವಾಹಿನಿಯ ರಜತ ಮಹೋತ್ಸವ ಸಮಿತಿಯ ಸಂಚಾಲಕ ರಘುನಾಥ್ ಮಾಬಿಯಾನ್, ಕೋಶಾಧಿಕಾರಿ ನಾರಾಯಣ ಬಿ.ಎಸ್., ಮಹಾಬಲ ಅಮೀನ್ ಉಪಸ್ಥಿತರಿದ್ದರು.