ಉಡುಪಿ, ಫೆಬ್ರವರಿ 23: ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನವನು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿ ಲವಲವಿಕೆಯಿಂದ ದೈನಂದಿನ ಕೆಲಸ ಕಾರ್ಯಗಳಲ್ಲಿ ಕ್ರಿಯಾಶೀಲರಾಗಿ ತೊಡಗಲು ಸಾಧ್ಯ. ಸರಕಾರಿ ನೌಕರರು ಪ್ರತಿದಿನ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಅವರು ಇಂದು ನಗರದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡುತ್ತಿದ್ದರು.
ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೇಹ ಸನ್ನದ್ಧರಾಗುವುದರ ಜೊತೆಗೆ ಮನೋಲ್ಲಾಸವು ಸಿಗುತ್ತದೆ. ಇದರ ಜೊತೆಗೆ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ. ದಿನನಿತ್ಯ ವ್ಯಾಯಾಮ, ವಾಯುವಿಹಾರ, ಯೋಗ ಅಥವಾ ಕ್ರೀಡೆಗಳಲ್ಲಿ ಭಾಗವಹಿಸಬೇಕು. ತಮ್ಮ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದರು.
ಸರಕಾರಿ ನೌಕರರು ಪ್ರತಿನಿತ್ಯ ಒತ್ತಡದ ನಡುವೆ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ಸರ್ವೇಸಾಮಾನ್ಯವಾಗಿದ್ದು, ಈ ವೃತ್ತಿ ಜೀವನದ ಜೊತೆಗೆ ತಮ್ಮ ಕುಟುಂಬದ ಜೊತೆ ಪ್ರೀತಿ, ವಿಶ್ವಾಸದೊಂದಿಗೆ ಹೆಚ್ಚಿನ ಸಮಯ ಕಳೆಯಲು ಮುಂದಾಗುವುದರೊ೦ದಿಗೆ ಮನೆಯಲ್ಲಿ ಅನೋನ್ಯವಾಗಿ ಇರಬೇಕು ಎಂದರು. ಜಿಲ್ಲೆಯ ಎಲ್ಲಾ ಸರಕಾರಿ ನೌಕರರು ಒಂದು ಕುಟುಂಬದ ಹಾಗೆ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ನನಗೆ ಖುಶಿ ತಂದಿದೆ. ಇದನ್ನು ಮುಂದಿನ ದಿನಗಳಲ್ಲಿಯೂ ಸಹ ಮುಂದುವರೆಸಿಕೊ೦ಡು ಹೋಗೋಣ ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯ ಹಾಗೂ ಕ್ರೀಡೆಯ ಪ್ರತಿಜ್ಞಾ ವಿಧಿಗಳನ್ನು ಬೋಧಿಸಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಜಿಲ್ಲಾ ಖಜಾಂಜಿ ಶರೀಫ್ ರೋಣ, ಜಿಲ್ಲಾ ಪರಿಷತ್ ಸದಸ್ಯ ಯುವಜತ್ತನ್, ಕಾರ್ಯಾಧ್ಯಕ್ಷ ದಯಾನಂದ್, ಗೌರವ ಅಧ್ಯಕ್ಷ ಕೆ.ಆರ್ ನಾಗೇಶ್ ಆಚಾರ್, ಉಪಾಧ್ಯಕ್ಷ ದೇವರಾಜ್, ಸುಭಾಷ್ ಹೆಗ್ಡೆ, ಪ್ರಶಾಂತ್ ಶೆಟ್ಟಿ, ಹೆಬ್ರಿ ತಾಲೂಕು ಪಂಚಾಯತ್ ಅಧ್ಯಕ್ಷ ಹರೀಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕ.ರಾ.ಸ.ನೌ ಸಂಘದ ಜಿಲ್ಲಾಧ್ಯಕ್ಷ ಕೆ.ದಿನಕರ ಶೆಟ್ಟಿ ಅಂಪಾರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಪ್ರಕಾಶ್ ಶೆಟ್ಟಿ ಹಾವಂಜೆ ನಿರೂಪಿಸಿದರೆ, ಜಿಲ್ಲಾ ಕಾರ್ಯದರ್ಶಿ ಕೃಷ್ಣಯ್ಯ ವಂದಿಸಿದರು.