ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆದದ್ದನ್ನು ಸಮರ್ಥಿಸಲು ಸಾಧ್ಯವಿಲ್ಲ; ಜಯಪ್ರಕಾಶ್ ಹೆಗ್ಡೆ

ಉಡುಪಿ: ಮರಕ್ಕೆ ಕಟ್ಟಿ ಹಾಕಿ ಹೊಡೆದದ್ದು ತಪ್ಪು. ಅದನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ. ಮೀನು ಕದ್ದ ಮಹಿಳೆಯನ್ನು ಹಿಡಿದು ಪೊಲೀಸರಿಗೆ ಕೊಡಬೇಕಿತ್ತು. ಅದನ್ನು ಬಿಟ್ಟು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದಿತ್ತು ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಮಲ್ಪೆ ಬಂದರಿನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇನ್ನು ಕೇಸು ವಾಪಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ಕೇಸು ದಾಖಲಾಗಿದೆ. ಇನ್ನೂ ತೀರ್ಮಾನ ಕೋರ್ಟಿನಲ್ಲಿ ಆಗಬೇಕು. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವಿಡಿಯೋ ವೈರಲ್ ಆಗಿ ದಾಖಲೆಯಾಗಿದೆ. ಮುಂದೆ ಎಲ್ಲೂ ಇಂತಹ ಘಟನೆ ನಡೆಯಬಾರದು. ಮೀನು ಕಳ್ಳತನದ ಬಗ್ಗೆ ಮೊದಲೇ ದೂರು ಕೊಡಬೇಕಿತ್ತು. ಬಂದರು ನಿರ್ವಹಣೆ ರಿನಿವಲ್ ಆಗಬೇಕು. ಎಲ್ಲಾ ಸಿಸಿ ಟಿವಿಗಳು ಸರಿಯಾಗಿ ಕೆಲಸ ಮಾಡಬೇಕು ಎಂದರು.