ಉಡುಪಿ: ಮಹಾದಾಯಿ ಯೋಜನೆ ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎ.26ರಂದು ರಾಜ್ಯಾದ್ಯಂತ ಈಡುಗಾಯಿ ಒಡೆಯುವ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ರಾಜ್ಯಾದ್ಯಂತ 2 ಕೋಟಿ ಈಡುಗಾಯಿ ಒಡಿಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದರು.
ಉಡುಪಿಯ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾದಾಯಿ ಯೋಜನೆ, ಕಳಸಾ ಬಂಡೂರಿ, ಮೇಕೆದಾಟು ಯೋಜನೆ, ಉದ್ಯೋಗ, ಗ್ರೇಟರ್ ಬೆಂಗಳೂರು, ಸಮಗ್ರ ಕರ್ನಾಟಕದ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಇಡೀ ರಾಜ್ಯ ಈಡುಗಾಯಿ ಚಳುವಳಿ ಮೂಲಕ ಒತ್ತಾಯ ಮಾಡಬೇಕು ಎಂದರು.ಮಸೀದಿ, ಹೋಟೆಲ್, ದೇವಸ್ಥಾನ, ಅಂಗಡಿ ಎಲ್ಲಿಯಾದರೂ ಕಾಯಿ ಒಡೆಯಬಹುದು.
ಈಡುಗಾಯಿ ಎಲ್ಲದಕ್ಕೂ ಬಳಸುವ ವಸ್ತು ಅದರಲ್ಲೊಂದು ಶಕ್ತಿಯಿದೆ ಎಂದ ಅವರು, ತೆಂಗಿನಕಾಯಿ ದರ ಹೆಚ್ಚಳವಾಗಿದೆ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿ, ತೆಂಗಿನಕಾಯಿಗೆ 50 ರುಪಾಯಿ ಆದ್ರೂ ಪರವಾಗಿಲ್ಲ. ಒಂದು ಈಡ್ ಗಾಯಿ ಒಡೆದರೆ ಆಕಾಶ ಏನು ಬಿದ್ದು ಹೋಗಲ್ಲ. ಎಲ್ಲ ಹೋರಾಟಕ್ಕೂ ಕನ್ನಡಿಗರು ಸಿದ್ದ ಇರಬೇಕು. ನಾಡಿಗಾಗಿ ಕನ್ನಡಕ್ಕಾಗಿ ಕಾಯಿ ಒಡಿಯೋಣ ಎಂದು ಹೇಳಿದರು.












