ಉಡುಪಿ: ಕಳೆದ ಹಲವು ದಿನಗಳಿಂದ ಸುರಿದ ಭಾರೀ ಮಳೆಯಿಂದ ಉಡುಪಿ ಜಿಲ್ಲೆಯಲ್ಲಿ 55 ಕೋಟಿ ರೂ. ನಷ್ಟ ಉಂಟಾಗಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇಂದು ಕಡಲ್ಕೊರೆತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕೆಮ್ಮಣ್ಣು ಗ್ರಾ.ಪಂ. ವ್ಯಾಪ್ತಿಯ ಗುಜ್ಜರಬೆಟ್ಟು ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಚರ್ಚಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಇಂದು ಸಂಜೆಯವರೆಗೂ ಮಳೆಯಿಂದ ಹಾನಿಯಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಉಡುಪಿಯಲ್ಲಿ ಇದ್ದು ನೆರೆಹಾನಿ ನೋಡುವಂತೆ ಜನರ ಬೇಡಿಕೆ ಇಟ್ಟಿದ್ದಾರೆ. ನಾನು ಇಲ್ಲೇ ಮನೆ ಮಾಡಿ ನೆಲೆಸಲು ತಯಾರಿದ್ದೇನೆ. ಜವಾಬ್ದಾರಿ ಇದೆ ಅಧಿವೇಶನ ನಡಿತಾ ಇದೆ, ಇಂದು ಸಂಡೇ ರಜೆ ಇದ್ದಾಗಲೂ ಬಂದಿದ್ದೇನೆ. ನನ್ನ ಅವಶ್ಯಕತೆ ಇದ್ದಾಗ ಇಲ್ಲಿಗೆ ಬರುತ್ತೇನೆ ದಿನದ 24 ಗಂಟೆಗಳ ಕಾಲ ಜಿಲ್ಲಾಡಳಿತ, ಸರ್ಕಾರ ಎಚ್ಚರವಾಗಿದೆ. ಎಲ್ಲೂ ಯಾವ ತೊಂದರೆ ಆಗಬಾರದು. ಪ್ರಾಣ ಹಾನಿ ಆಗಬಾರದು ಎಂದು ಮುನ್ನೆಚ್ಚರಿಕೆ ಕೈಗೊಂಡಿದ್ದೇವೆ. ಯಾವುದೇ ತೊಂದರೆ ಆಗಬಾರದು ಎಂದು ಈಗಾಗಲೇ ಹಲವು ಕ್ರಮ ಕೈಗೊಂಡಿದ್ದೇವೆ ಎಂದರು.
25 ದಿನಗಳ ಹಿಂದೆ ಜಿಲ್ಲಾ ಮಟ್ಟದ ಸಭೆ ನಡೆಸಿದ್ದೇವೆ. ಅರಣ್ಯ ಇಲಾಖೆಗೆ ಸೂಚನೆ ಕೊಟ್ಟಿದ್ದೇನೆ. 500 ರಿಂದ 600 ಮರಗಳನ್ನು ತೆರವು ಮಾಡಲಾಗಿದೆ. ಮೆಸ್ಕಾಂನವರಿಗೆ ಈ ಮೊದಲೇ ಸೂಚನೆ ಕೊಟ್ಟಿದ್ದೇನೆ. ಶಾಲೆಯ ಪಕ್ಕ ಇರುವ ವಯರ್ ಗಳನ್ನು ತೆರವು ಮಾಡಲು ಸೂಚನೆ ಕೊಟ್ಟಿದ್ದೇನೆ. ಅವರು ಕೂಡ ಅಪಾಯ ಇರುವಲ್ಲಿ ತೆರವು ಮಾಡಿದ್ದಾರೆ. ನಗರದಲ್ಲಿ ಚರಂಡಿಯಿಂದ ಸಮಸ್ಯೆ ಆಗಿತ್ತು, ಸ್ವಚ್ಛಗೊಳಿಸಿದ್ದಾರೆ. ಕಾಲು ಸಂಕಗಳ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇವೆ. ಜಿಲ್ಲಾಡಳಿತದಿಂದ ಹೆಲ್ಪ್ ಲೈನ್ ಇಟ್ಟಿದ್ದೇವೆ ಎಂದು ತಿಳಿಸಿದರು.ಕಡಲು ಕೊರೆತಕ್ಕೆ 5 ಕೋಟಿ ಬಿಡುಗಡೆ ಆಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಳೆಬಾಕಿ ಪಾವತಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ತಕ್ಷಣ 5 ಕೋಟಿ ಬಿಡುಗಡೆಗೆ ಮನವಿ ಮಾಡಿದ್ದೇವೆ. 5 ಕೋಟಿ ಬೇಗ ಬರುತ್ತೆ ಎಂದು ಭರವಸೆ ನೀಡಿದರು.