ಉಡುಪಿ: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಡಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕರ್ತವ್ಯಲೋಪದಡಿ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಮಲ್ಪೆ ನಿವಾಸಿಗಳಾದ ಲೀಲಾ ಮತ್ತು ಪಾರ್ವತಿ ಬಂಧಿತ ಆರೋಪಿಗಳು. ಹಲ್ಲೆ ಪ್ರಕರಣದ ಕುರಿತು ಸರಿಯಾಗಿ ಮಾಹಿತಿ ಸಂಗ್ರಹಿಸದ ಕಾರಣ ಮಲ್ಪೆ ಪೊಲೀಸ್ ಠಾಣೆಯ ಬೀಟ್ ಕಾನ್ಸ್ಟೆಬಲ್ಗಳನ್ನು ಅಮಾನತುಗೊಳಿಸಲಾಗಿದೆ.
ಇತ್ತೀಚೆಗೆ ಕಾಪು ಠಾಣೆಯಿಂದ ವರ್ಗಾವಣೆಗೊಂಡ ಹೆಡ್ ಕಾಸ್ಟೇಬಲ್ ಸುರೇಶ ಹಾಗೂ ಪೊಲೀಸ್ ಕಾಸ್ಟೇಬಲ್ ನಾಗರಾಜ್ ಅವರನ್ನು ಅಮಾನತುಗೊಳಿಸಿ ಎಸ್ಪಿ ಆದೇಶ ಹೊರಡಿಸಿದ್ದಾರೆ.
ಮಹಿಳೆ ಮೇಲೆ ನಡೆದಿರುವ ಅಮಾನುಷ ಕೃತ್ಯವನ್ನು ರಾಜ್ಯ ಮಹಿಳಾ ಆಯೋಗ ತೀವ್ರವಾಗಿ ಖಂಡಿಸಿದೆ. ಸದರಿ ಪ್ರಕರಣಕ್ಕೆ ಕಾರಣಕರ್ತರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಸಮಗ್ರ ವರದಿಯನ್ನು ಅತೀ ಶೀಘ್ರದಲ್ಲಿ ಆಯೋಗಕ್ಕೆ ಸಲ್ಲಿಸುವಂತೆ ತಿಳಿಸಿದೆ.












