ಮಲ್ಪೆ: ಕೇಂದ್ರದ ಬಂದರು, ಶಿಪ್ಪಿಂಗ್ ಹಾಗೂ ವಾಟರ್ವೇ ಸಚಿವಾಲಯದ ಆಡಳಿತಕ್ಕೊಳಪಟ್ಟ ಕೊಚ್ಚಿನ್ ಶಿಪ್ಯಾರ್ಡ್ ಲಿ.ನ. ಸಹಸಂಸ್ಥೆ ಮಲ್ಪೆಯ ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ(ಯುಸಿಎಸ್ಎಲ್) ನಿರ್ಮಾಣಗೊಂಡ 3800 ಟಿಡಿಡಬ್ಲ್ಯು (ಟೋಟೆಲ್ ಡೆಡ್ವೆಯ್ಟ್) ಸಾಮರ್ಥ್ಯದ ಜನರಲ್ ಕಾರ್ಗೋ ಹಡಗುಗಳ ಸರಣಿಯ ಮೊದಲ ಹಡಗನ್ನು ಇಂದು ಮಲ್ಪೆಯ ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ಕೊಚ್ಚಿನ್ ಶಿಪ್ಯಾರ್ಡ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಧು ಎಸ್.ನಾಯರ್ ಅವರು 14 ಹಡಗುಗಳ ಸರಣಿ ಯಲ್ಲಿ ಮೊದಲ ಹಡಗನ್ನು ಹೊಸದಿಲ್ಲಿಯಲ್ಲಿರುವ ರಾಯಲ್ ನಾರ್ವೆಯನ್ ರಾಯಭಾರ ಕಚೇರಿಯ ಸಚಿವರ ಸಲಹೆಗಾರ ಹಾಗೂ ಯೋಜನೆಯ ಉಪಮುಖ್ಯಸ್ಥರಾದ ಮಾರ್ಟಿನ್ ಅಮ್ಡಾಲ್ ಬೋಥೀಮ್ ಅವರಿಗೆ ಹಸ್ತಾಂತರಿಸಿದ್ದು, ಮಾರ್ಟಿನ್ ಅವರು ಸ್ವಿಚ್ ಒತ್ತುವ ಮೂಲಕ ಹಡಗನ್ನು ನೀರಿಗೆ ಬಿಡುಗಡೆಗೊಳಿಸಿದರು.
ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಈ ಒಣ ಸರಕುಗಳನ್ನು ಸಾಗಿಸುವ ಕಾರ್ಗೋ ಶಿಪ್ನ್ನು ನಾರ್ವೆಯ ಮೆಸಸ್ ವಿಲ್ಸನ್ ಎಎಸ್ಎಗಾಗಿ ನಿರ್ಮಿಸಿದೆ. ಸಂಸ್ಥೆಯ ಈ ಹಡಗನ್ನು ಭಾರತ ಸರಕಾರದ ‘ಆತ್ಮನಿರ್ಭರ ಭಾರತ’, ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ಯೋಜನೆ ಯಡಿ ನಿರ್ಮಿಸಿದೆ ಎಂದು ಕೊಚ್ಚಿನ್ ಶಿಪ್ಯಾರ್ಡ್ನ ಸಿಎಂಡಿ ಮಧು ಎಸ್.ನಾಯರ್ ತಿಳಿಸಿದರು.
ಇಂದು ನಾರ್ವೆಗೆ ಹಸ್ತಾಂತರಗೊಂಡ ವಿಲ್ಸನ್ ಎಎಸ್ಎ ಹಡಗಿನ ಉದ್ದ 89.43ಮೀ., ಅಗಲ 13.2ಮೀ. ಮತ್ತು ಎತ್ತರ 4.2ಮೀ.ಗಳಾಗಿದೆ. ಹಡಗನ ವಿನ್ಯಾಸ ನೆದರ್ಲೆಂಡ್ಸ್ನ ಕೋನೊಶಿಪ್ ಇಂಟರ್ನ್ಯಾಷನಲ್ ನದ್ದಾಗಿದ್ದು,ಇವು ಯುರೋಪ್ ಕರಾವಳಿ ಜಲಮಾರ್ಗದಲ್ಲಿ ಸಾಮಾನ್ಯ ಸರಕುಗಳ ಸಾಗಣೆಗಾಗಿ ಪರಿಸರ ಸ್ನೇಹಿ ಡೀಸೆಲ್ ಎಲೆಕ್ಟ್ರಿಕ್ ನೌಕೆಯಾಗಿ ನಿರ್ಮಿಸಲಾಗಿದೆ ಎಂದರು.
ನಾರ್ವೆಯ ಬರ್ಗೆನ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ವಿಲ್ಸನ್ ಎಎಸ್ಎ ಸಂಸ್ಥೆ ಯುರೋಪ್ನಲ್ಲಿ ಪ್ರಮುಖ ಕಿರು ಸಮುದ್ರ ನೌಕೆ ನಿರ್ವಾಹಕ ಕಂಪನಿಯಾಗಿದೆ. ಯುರೋಪಿನಾದ್ಯಂತ ಸುಮಾರು 15 ದಶಲಕ್ಷ ಟನ್ ಒಣ ಸರಕುಗಳನ್ನು ಇದು ಸಾಗಿಸುತ್ತಿದೆ. ಈ ಕಂಪೆನಿಯು 1500 ರಿಂದ 8500 ಡಿಡಬ್ಲ್ಯುಟಿ ಸಾಮರ್ಥ್ಯದವರೆಗಿನ ಸುಮಾರು 130 ಹಡಗುಗಳನ್ನು ನಿರ್ವಹಿಸುತ್ತದೆ.
ಈ ಸಂದರ್ಭದಲ್ಲಿ ನಾರ್ವೆ ಎಂಬಸ್ಸಿಯ ಮಾರ್ಟಿನ್ ಅಲ್ಲದೇ, ಕ್ರಿಶ್ಚಿಯಾನ್ ಕಾರ್ಟರ್, ಕೊಚ್ಚಿನ್ ಶಿಪ್ಯಾರ್ಡ್ನ ತಾಂತ್ರಿಕ ನಿರ್ದೇಶಕ ಬಿಜೋಯ್ ಭಾಸ್ಕರ್, ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಲಿ.ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿಕುಮಾರ್ ಎ. ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
14 ಹಡಗುಗಳ ನಿರ್ಮಾಣಕ್ಕೆ ಒಪ್ಪಂದ: ಉಡುಪಿ ಕೊಚ್ಚಿನ್ ಶಿಪ್ಯಾರ್ಡ್, ವಿಲ್ಸನ್ ಎಎಸ್ಎಗೆ ಒಟ್ಟು 14 ಹಡಗುಗಳನ್ನು ಸರಬರಾಉ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಮಧು ನಾಯರ್ ತಿಳಿಸಿದರು.
ಇವುಗಳಲ್ಲಿ ಆರು ಹಡಗುಗಳ ನಿರ್ಮಾಣ ಕಾರ್ಯಾದೇಶದ ಮುಂದುವರಿದ ಭಾಗವಾಗಿ ವಿಲ್ಸನ್ ಎಎಸ್ಎ ಕಂಪನಿ ಕಳೆದ ಜೂನ್ನಲ್ಲಿ ನಾಲ್ಕು ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಇನ್ನೂ ನಾಲ್ಕು ಸೇರಿದಂತೆ ಎಂಟು 6300 ಟಿಡಿಡಬ್ಲ್ಯು ಹಡಗುಗಳ ನಿರ್ಮಾಣದ ಒಪ್ಪಂದಕ್ಕೆ ಸಹಿ ಹಾಕಿದೆ ಎಂದರು.
ಈ ಮೊದಲು ಮಲ್ಪೆಯಲ್ಲಿದ್ದ ಟೆಬ್ಮಾ ಶಿಪ್ಯಾರ್ಡ್ ನಷ್ಟದ ಕಾರಣ ನಡೆಸಲು ಅಸಾಧ್ಯವೆನಿಸಿದಾಗ, ಕೊಚ್ಚಿನ್ ಶಿಪ್ ಯಾರ್ಡ್ ಲಿ. 2020ರಲ್ಲಿ ಎನ್ಸಿಎಲ್ಟಿ ಪ್ರಕ್ರಿಯೆ ಮೂಲಕ ಯಾರ್ಡ್ನ್ನು ಸ್ವಾಧೀನಪಡಿಸಿಕೊಂಡಿತ್ತು. ಇದೀಗ ಮೂರು ವರ್ಷಗಳ ಕಡಿಮೆ ಅವಧಿಯಲ್ಲಿ ಇದನೊಂದು ಲಾಭದಾಯ ಯೋಜನೆಯಾಗಿ ಪರಿವರ್ತಿಸಲಾಗಿದೆ ಎಂದ ಮಧು ನಾಯರ್, 2023ರಲ್ಲಿ ಎರಡು 62ಟನ್ ಬೊಲ್ಲಾರ್ಡ್ ಫುಟ್ ಟಗ್ಗಳನ್ನು ಅದಾನಿ ಹಾರ್ಬರ್ ಸರ್ವಿಸಸ್ ಲಿ. ಕಂಪೆನಿಯ ಓಷನ್ ಸ್ಪಾರ್ಕಲ್ ಲಿ.ಗೆ ಯಶಸ್ವಿಯಾಗಿ ಹಸ್ತಾಂತರಿಸಲಾಗಿದೆ.
ಅಲ್ಲದೇ ಎರಡು 70ಟಿ ಬೊಲ್ಲಾರ್ಡ್ ಪುಲ್ ಟಗ್ಗಳನ್ನು ಅವೇ ಕಂಪೆನಿಗಳಿಗೆ ಪೂರೈಸಲು ಕಾರ್ಯಾದೇಶವನ್ನು ಪಡೆಯಲಾಗಿದೆ ಎಂದು ನಾಯರ್ ವಿವರಿಸಿದರು.
ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್ಯಾರ್ಡ್, ಮೆಸಸ್ ಕೊನೊಶಿಪ್ ಇಂಟರ್ನ್ಯಾಷನಲ್ ಸಹಯೋಗದೊಂದಿಗೆ ಮೆಸಸ್ ವಿಲ್ಸನ್ ಎಎಸ್ಎಗಾಗಿ ಅತ್ಯುತ್ತಮ ಗುಣಮಟ್ಟದ ಹಡಗನ್ನು ನಿರ್ಮಿಸಿಕೊಡುವ ಮೂಲಕ ಅಂತಾರಾಷ್ಟ್ರೀಯ ಹಡಗು ನಿರ್ಮಾಣ ಮಾರುಕಟ್ಟೆಯಲ್ಲಿ ಬಲವಾದ ನೆಲೆಯನ್ನು ಸ್ಥಾಪಿಸಿದೆ.
ಕೊಚ್ಚಿನ್ ಶಿಪ್ಯಾರ್ಡ್ ಲಿ. ಮತ್ತು ಅದರ ಸಹಸಂಸ್ಥೆಯಾದ ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಎರಡೂ ಪಾಶ್ಚಿಮಾತ್ಯ ಯುರೋಪಿಯನ್ ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ಹಡಗುಗಳನ್ನು ನಿರ್ಮಿಸಿ ಪೂರೈಸಲು ತಮ್ಮ ಅಚಲ ಬದ್ಧತೆಯನ್ನು ಪ್ರದರ್ಶಿಸುತ್ತಿವೆ ಎಂದು ತಿಳಿಸಿದರು.