ಮನದ ಬಣ್ಣವಾಗಲಿ ತಿರಂಗ: ರಶ್ಮಿತಾ ಬರೆದ ಸ್ವಾತಂತ್ರ್ಯೋತ್ಸವದ ವಿಶೇಷ ಬರಹ

-ರಶ್ಮಿತಾ ಸಂತೋಷ್

ಉಡುಪಿ: ಆಗಸ್ಟ್ 15 , ಇದು ಪ್ರತಿಯೊಬ್ಬ ಭಾರತೀಯರ ಮನಗಳಲ್ಲೂ ದೇಶಾಭಿಮಾನ ಮನೆ ಮಾಡುವಂತಹ ದಿನ. ತ್ರಿವರ್ಣ ಧ್ವಜವು ದೇಶದೆಲ್ಲೆಡೆ ತಲೆಯೆತ್ತಿ ಬಾನೆತ್ತರಕ್ಕೆ ಹಾರಡುವಂತ ಕ್ಷಣವನ್ನು ಕಣ್ತುಬಿಕೊಳ್ಳಲು ಕಾರಣ ಅದೆಷ್ಟೋ ತ್ಯಾಗ ಬಲಿದಾನ.

ಸರ್ವ ಜನಾಂಗದ ಶಾಂತಿಯ ತೋಟದಲ್ಲಿಂದು ತಿರಂಗಾ ಧ್ವಜದ ಕಲರವ. ಜಾತಿ , ಧರ್ಮ, ಜನಾಂಗದ ಭೇದವನ್ನು ತೊರೆದು ಎಲ್ಲರು ಒಂದಾಗುವ ದಿನ. ಗಡಿಯಲ್ಲೂ ನಮ್ಮ ವೀರ ಯೋಧರು ದೇಶದ್ವಜ ಹಾರಿಸಿ ಸಂಭ್ರಮಿಸಿ ದೇಶಭಕ್ತಿ ತೋರುವ ಕ್ಷಣ.

ದೇಶದ ಪ್ರತಿಯೊಬ್ಬ ನಾಗರಿಕನ ಎದೆಯಲ್ಲಿ ದೇಶಪ್ರೇಮದ ಕಿಚ್ಚು ಇಂದು ಹೆಚ್ಚಾಗಲು ಅದೆಷ್ಟೋ ನೆತ್ತರ ಕೋಡಿಯೇ ಹರಿದಿದೆ. ಅದು ಹಾಗೇ ಅಲ್ಲವೇ ದೇಶ ಎನ್ನುವ ವಿಷಯ ಬಂದಾಗ ಪ್ರತಿಯೊಬ್ಬರಲ್ಲೂ ನನ್ನ ದೇಶ ಎನ್ನುವ ಆಲೋಚನೆ ಮೂಡೆ ಮೂಡುತ್ತದೆ.

ನೂರಾರು ಇತಿಹಾಸ, ಸಾವಿರಾರು ವಾಸ್ತುಶಿಲ್ಪ , ಬಣ್ಣಿಸಲು ಪದಗಳೇ ಸಾಲದ ದೇಶ ನಮ್ಮದು , ಅಂದಿನ ಸಿಂಧೂ ನಾಗರಿಕತೆಯಿಂದ ಇಂದಿನ ವರೆಗೂ ತನ್ನ ದೇಶ ಕಂಪನ್ನು ಪ್ರಪಂಚದೆಲ್ಲೆಡೆ ಪಸರಿಸಿದೆ. ವರ್ಷ ವರ್ಷ ಲಕ್ಷಾಂತರ ಪ್ರವಾಸಿಗರು ಭವ್ಯ ಭಾರತದ ಸೊಬಗನ್ನು ಕಣ್ತುಂಬಿಕೊಳ್ಳಲು ಭೇಟಿ ನೀಡುತ್ತಾರೆ. ಅಂದಿನ ನಳಂದಾ ವಿಶ್ವವಿದ್ಯಾಲಯ ದಿಂದ ಇಂದಿನ ಹೈಟೆಕ್ ಶಿಕ್ಷಣ ವ್ಯವಸ್ಥೆ ವರೆಗೂ ವಿದೇಶಿಯರನ್ನು ಸೆಳೆಯುತ್ತಲೇ ಇದೆ. ಭಾರತದ ಕೆಲ ಪುರಾತನ ದೇವಾಲಯಗಳು ಇಂದಿಗೂ ವಿಸ್ಮಯವನ್ನು ಒಳಗೊಂಡಿದ್ದು ಇದು ನಿಜಕ್ಕೂ ಅಚ್ಚರಿಯೇ ಸರಿ. ತರ್ಕಕ್ಕೆ ಸಿಗದ ಅದೆಷ್ಟೋ ವಿಷಯಗಳು ನಮ್ಮ ದೇಶ ಒಳಗೊಂಡಿದೆ.

ದೇಶ ಇಷ್ಟೆಲ್ಲಾ ಮುಂದುವರೆಯಲು ಅಂದಿನ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಛಲ ಬಿಡದ ಹೋರಾಟ ಮತ್ತು ತನ್ನ ದೇಶವನ್ನು ಬ್ರಿಟಿಷರಿಂದ ಹಿಂಪಡೆಯಲು ನಡೆಸಿದ ಚಳುವಳಿ ಎಲ್ಲವೂ ಇಂದಿನ ತ್ರಿವರ್ಣ ಧ್ವಜದ ನಿರ್ಭಿತ ಹಾರಾಟಕ್ಕೆ ಸಾಕ್ಷಿಯಾಗಿದೆ. ಸ್ವಾತಂತ್ರ್ಯೋತ್ಸವದ ಈ ದಿನ ನಮ್ಮ ಮೈಮನದಲ್ಲೂ ತಿರಂಗದ ರಂಗು ಕಾಡಲಿ.