ಉಡುಪಿ: ಮಣಿಪಾಲದ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್)ನ ದಶಮಾನೋತ್ಸವದ ಅಂಗವಾಗಿ ಮೂರು ದಿನಗಳ ಅದ್ದೂರಿ ಕಾರ್ಯಕ್ರಮವನ್ನು ಇದೇ ಡಿ.14, 15 ಮತ್ತು 16ರಂದು ಮಾಹೆಯ ಸರ್ವೋದಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ವರದೇಶಿ ಹಿರೇಗಂಗೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.14 ರಂದು ಬೆಳಿಗ್ಗೆ 10 ಗಂಟೆಗೆ ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ. ಎಂ.ಡಿ. ವೆಂಕಟೇಶ್ ಉದ್ಘಾಟಿಸಲಿದ್ದಾರೆ. ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್ ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಪೋಟೋ ವಿಶ್ವವಿದ್ಯಾನಿಲಯದ ಕುಲಪತಿ ಡಾ.ವಿನೋದ್ ಭಟ್, ಮಾಹೆಯ ಸಹ ಕುಲಪತಿ ಪ್ರೊ.ಮಧು ವೀರರಾಘವನ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬರಹಗಾರ ವಿಮರ್ಶಕ ಪ್ರೊ. ಮನು ಚಕ್ರವರ್ತಿ, ಬರಹಗಾರ- ನಿರ್ದೇಶಕ ಮಹೇಶ್ ದತ್ತಾನಿ, ಮಾಧ್ಯಮ ಶಿಕ್ಷಣ ತಜ್ಞ ಬುರೋಶಿವ ದಾನ್‌ಗುಪ್ತ, ಟರ್ಕಿಯ ಪ್ರೊ. ಗುರ್ಬುಜ್ ಅಲ್ತಾನ್ ಮತ್ತು ಎಡಿನ್‌ಬರ್ಗ್ ನೇಪಿಯರ್ ವಿಶ್ವವಿದ್ಯಾಲಯದ ಪ್ರೊ. ಬಾಷಾಬಿ ಪ್ರೇನರ್ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ ಎಂದರು.
ಡಿ.15 ರಂದು ಜಿಸಿಪಿಎಎಸ್ ಅಲುಮ್ನೈ ಮೀಟ್ ನಡೆಯಲಿದ್ದು, ದೇಶ, ವಿದೇಶದಲ್ಲಿರುವ ಹಳೆಯ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ಮಾಹೆಯ ಹಳೆಯ ವಿದ್ಯಾರ್ಥಿ ಸಂಘಟನೆಯ ನಿರ್ದೇಶಕ ಡಾ.ರೋಹಿತ್ ಸಿಂಗ್ ಸಭೆಯನ್ನು ಉದ್ಘಾಟಿಸಲಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರದರ್ಶನ ಡಿ.14 ರಿಂದ 16 ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ನಡೆಯಲಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಿವಂಗತ ಪ್ರೊ.ಯು. ಆರ್. ಅನಂತಮೂರ್ತಿ ಅವರ ಕುರಿತಾದ ಪ್ರೊ. ಮನು ಚಕ್ರವರ್ತಿ ಅವರು ರಚಿಸಿರುವ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಪುಸ್ತಕ ಬಿಡುಗಡೆ ಸಮಾರಂಭವೂ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಭ್ರಾಮರಿ ಶಿವಪ್ರಕಾಶ್, ಕೌಸ್ತುಭ ಶೆಟ್ಟಿ, ಅಕ್ಷತಾ ಉಪಸ್ಥಿತರಿದ್ದರು.